
ಹಾಸನ: ಬೆಂಗಳೂರಿನಿಂದ ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಸಂಪರ್ಕ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ‘ರಾಷ್ಟ್ರೀಯ ಹೆದ್ದಾರಿ 75’ರ (NH 75) ಶಿರಾಡಿ ಘಾಟ್ನಲ್ಲಿ (Shiradi Ghat) ಭೂ ಕುಸಿತ (Land Slide) ಸಂಭವಿಸಿದೆ. ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಲಾರಿಗಳೂ ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಏಕ ಮುಖ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಸರದಿಯಲ್ಲಿ ವೇಗಮಿತಿಯೊಳಗೆ ಎಲ್ಲ ಬಗೆಯ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಅದಿಕಾರಿಗಳ ಸಲಹೆಯಂತೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ನಿರಂತರ ಮಳೆಯಿಂದಾಗಿ ಶಿರಾಡಿಘಾಟ್ನ (Shiradi Ghat) ದೋಣಿಗಲ್ ಸಮೀಪ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಲ್ ಗ್ರಾಮದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ ನಡೆದಿದೆ. ಭೂ ಕುಸಿತದಿಂದಾಗಿ ನಿನ್ನೆ (ಜುಲೈ 14) ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ವಾರದ ಹಿಂದಷ್ಟೇ ಅಲ್ಪ ಪ್ರಮಾಣದಲ್ಲಿ ಶಿರಾಡಿ ಘಾಟ್ನ ರಸ್ತೆ ಕುಸಿದಿತ್ತು. 4 ದಿನಗಳು ಹಿಂದೆ ಲೋಕೋಪಯೋಗಿ ಸಚಿವರು ಭೇಟಿ ನೀಡಿದ್ದರು. ಇದೀಗ ದೋಣಿಗಲ್ ಸಮೀಪ ಮತ್ತೆ ರಸ್ತೆ ಕುಸಿದು ಬಿದ್ದಿದೆ. ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹಲವೆಡೆ ಎಡಬಿಡದೆ ಸುರಿಯುತ್ತಿದೆ. ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನಲ್ಲಿ ಭಾರೀ ಮಳೆಯಾಗಿದೆ.
ಚಾರ್ಮಾಡಿ ಘಾಟ್ನಲ್ಲಿ ಲಘು ಭೂಕುಸಿತ
ಕಳೆದ 10 ಚಿಕ್ಕಮಗಳೂರು ಜಿಲ್ಲೆಯ ದಿನಗಳಿಂದ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ (Charmadi Ghat) ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ನಿರಂತರ ಮಳೆಯಿಂದ (Rain) ವಾಹನ ಸಂಚಾರ ದುಸ್ತರವಾಗಿದೆ. ಅಲ್ಲದೆ ಚಾರ್ಮಾಡಿ ಘಾಟ್ನ ಸೋಮನಕಾಡು ಸಮೀಪ ಲಘು ಭೂಕುಸಿತವಾಗಿದ್ದು ಸದ್ಯ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೆದ್ದಾರಿ ಪ್ರಾಧಿಕಾರದ ಜೆಸಿಬಿ ಯಂತ್ರಗಳು ಮಣ್ಣು ತೆರವುಗೊಳಿಸುತ್ತಿವೆ.
Published On - 6:43 am, Fri, 15 July 22