Hassan: ಮೊದಲು ಮಿಸ್ಸಿಂಗ್, ಆ ಮೇಲೆ ಕಿಡ್ನಾಪ್, ಕೊನೆಗೆ ಕೊಲೆ ಕೇಸ್: ಇದು ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆಯಾದ ಕತೆ

| Updated By: ಸಾಧು ಶ್ರೀನಾಥ್​

Updated on: Feb 08, 2023 | 5:45 PM

Hassan: ಒಟ್ನಲ್ಲಿ ಕೊಟ್ಟ ಹಣ ವಾಪಸ್ ಕೇಳಿದ ಅನ್ನೋ ಒಂದೇ ಕಾರಣಕ್ಕೆ ಸ್ನೇಹಿತನನ್ನೇ ಮುಗಿಸೋಕೆ ಸ್ಕೆಚ್ ಹಾಕಿದ ದುರುಳರು ಹಣ ಕೊಡುವುದಾಗಿ ಕರೆದೊಯ್ದು ಮೋಸದಿಂದ ಇರಿದು ಕೊಂದು ಮುಗಿಸಿದ್ದಾರೆ. ಮಿಸ್ಸಿಂಗ್ ಅಂತಾ ದಾಖಲಾದ ಕೇಸ್, ಕಿಡ್ನಾಪ್ ಆಗಿ ಬದಲಾಗಿ, ಈಗ ಕೊಲೆ ಕೇಸ್ ಆಗಿ ಪರಿವರ್ತನೆ ಆಗಿದೆ.

Hassan: ಮೊದಲು ಮಿಸ್ಸಿಂಗ್, ಆ ಮೇಲೆ ಕಿಡ್ನಾಪ್, ಕೊನೆಗೆ ಕೊಲೆ ಕೇಸ್: ಇದು ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆಯಾದ ಕತೆ
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆಯಾದ ಕತೆ
Follow us on

ಆತ ಕಾರ್ ಸರ್ವೀಸ್ ಸ್ಟೇಷನ್ ಮಾಡಿಕೊಂಡು ಚೆನ್ನಾಗಿ ದುಡಿಮೆ ಮಾಡ್ತಿದ್ದ, ಬಂದ ಲಾಭದಲ್ಲಿ ಬೇರೆ ವ್ಯವಹಾರ ಮಾಡೋಕೆ ಅಂತಾ ಟ್ಯಾಂಕರ್ ಲಾರಿ ಖರೀದಿ ಮಾಡೋಕೆ ಅಂತಾ ಸ್ನೇಹಿತನ (friend) ಜೊತೆಗೆ ವ್ಯವಹಾರ ಮಾಡಿ 12 ಲಕ್ಷಕ್ಕೆ ಡೀಲ್ ಕುದಿರಿಸಿದ್ದ. ಆದ್ರೆ ವಾಹನ ಇಷ್ಟ ಆಗದ ಕಾರಣ ವ್ಯವಹಾರ ಕ್ಯಾನ್ಸಲ್ ಮಾಡಿದ್ದ. ಪಡೆದಿದ್ದ ಎರಡೂವರೆ ಲಕ್ಷ ಅಡ್ವಾನ್ಸ್ ಹಣ ವಾಪಸ್ ಕೊಡಲು ಹೇಳಿದ್ದ, ಆದ್ರೆ ಒಂದೂವರೆ ವರ್ಷದಿಂದ ಹಣ ವಾಪಸ್ ಕೊಡದೆ (loan repayment) ಸತಾಯಿಸುತ್ತಿದ್ದ ಗೆಳೆಯ ನವೀನ್ ಹಣ ಕೊಟ್ಟಿದ್ದ ಸ್ನೇಹಿತ ಲಿಖಿತ್ ಗೌಡ ಚಳ್ಳೆಹಣ್ಣು ತಿನ್ನಿಸಿ ತಿರುಗಾಡ್ತಿದ್ದ. ಬೇರೆ ದಾರಿಯಿಲ್ಲದೆ ಕೋರ್ಟ್ ಮೆಟ್ಟಿಲೇರಿದರೂ ಕ್ಯಾರೆ ಅನ್ನದಿದ್ದಾಗ ನವೀನನ ಬೈಕ್ ಸೀಝ್ ಮಾಡಿದ್ದ ಲಿಖಿತ್ ವಿರುದ್ದ ಸಿಟ್ಟಾಗಿದ್ದ ನವೀನ್. ನೀನು (ಲಿಖಿತ್) ಜೀವಂತ ಇದ್ದರೆ ಅಲ್ಲವಾ ಹಣ ಕೇಳ್ತೀಯಾ ಅಂತಾ ಅವನನ್ನೇ ಮುಗಿಸೋಕೆ ನವೀನ ಸ್ಕೆಚ್ ಹಾಕಿದ್ದ. ಅದರಂತೆ ಭಾನುವಾರ ಹಣ ಕೊಡ್ತಿನಿ ಬಾ ಎಂದು ಕರೆಸಿ ಜೊತೆಗೆ ಕಾರಿನಲ್ಲಿ ಕರೆದೊಯ್ದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಮಗ ಕಾಣ್ತಿಲ್ಲ ಎಂದು ಮನೆಯವರು ಹುಡುಕಾಡುತ್ತಿದ್ದರೆ ನಡೆದಿರೋ ಗಂಭೀರ ಪ್ರಕರಣದ ತನಿಖೆಗಿಳಿದ ಪೊಲೀಸರು ಕೊಟ್ಟ ಸಾಲ ವಾಪಸ್ ಕೇಳಿದ್ದ ಗೆಳೆಯನ್ನೆ ಬರ್ಬರವಾಗಿ ಕೊಂದು ಮುಗಿಸಿರೋದನ್ನ ಪತ್ತೆ ಮಾಡಿದ್ದು ಇದೀಗ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ (Missing kidnap murder case).

ಹೌದು ಫೆಬ್ರವರಿ 5ರ ಭಾನುವಾರ ಹಾಸನದ (Hassan) ಹೊಯ್ಸಳನಗರ ಬಡಾವಣೆಯ ಲಿಖಿತ್ ಗೌಡ (26) ಸಂಜೆ 6 ಗಂಟೆ 11 ನಿಮಿಷಕ್ಕೆ ಮನೆಯಿಂದ ಆಚೆ ಹೋದವನು ರಾತ್ರಿಯಾದರೂ ಬಂದಿಲ್ಲ. ಫೋನ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ಹೋಗುವಾಗ ಸ್ನೇಹಿತ ಸಾಗರ್ ಜೊತೆಗೆ ಹೋಗುವದಾಗಿ ಹೇಳಿದ್ದರಿಂದ ಅವನಿಗೆ ಫೋನ್ ಮಾಡಿದ್ರೆ ಅವನ ಮೊಬೈಲ್ ಕೂಡ ಆಫ್ ಆಗಿದೆ. ಸಾಲ ಪಡೆದಿದ್ದ ನವೀನಗೆ ಫೋನ್ ಮಾಡಿದ್ರೆ ಆತನ ಮೊಬೈಕ್ ಕೂಡ ಸ್ವಿಚ್ ಆಫ್ ಆಗಿದೆ.

ಅಲ್ಲಿಗೆ ಏನೋ ಆಗಿದೆ ಎಂದು ಆತಂಕಗೊಂಡ ಮನೆಯವರು ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ಮೊದಲು ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ಪೊಲೀಸರು ನಂತರ ಕಿಡ್ನಾಪ್ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ಲಿಖಿತ್ ಮನೆಯಿಂದ ಹೋದ ಸಿಸಿ ಕ್ಯಾಮೆರಾ ವಿಡಿಯೋ ನಂತರ ಆತ ಹೊರಟ ಕಾರಿನಲ್ಲಿ ಸಾಗರ್ ಮತ್ತು ನವೀನ್ ಇದ್ದ ಸಿಸಿ ಕ್ಯಾಮರಾ ವೀಡಿಯೋ ಎಲ್ಲವನ್ನು ಪಡೆದ ಪೊಲೀಸರು ತನಿಖೆಗಿಳಿದಿದ್ದರು. ಎರಡು ದಿನವಾದ್ರು ಲಿಖಿತ್ ಪತ್ತೆ ಆಗದಿದ್ದಾಗ ಕೊಲೆ ಆಗಿರಬಹುದು ಎನ್ನೋ ಅನುಮಾನದಿಂದ ಲಿಖಿತ್ ನನ್ನು ಕರೆದೊಯ್ದಿದ್ದ ಸಾಗರ್ ಗ್ರಾಮದ ಪಕ್ಕದ ಯೋಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ನೂರಾರು ಪೊಲೀಸರು ಶೋಧ ಕಾರ್ಯ ನಡೆಸಿದಾಗ ಲಿಖಿತ್ ಗೌಡ ಮೃತದೇಹ ಪತ್ತೆಯಾಗಿದೆ.

ಲಿಖಿತ್ ನನ್ನು ಇರಿದು ಕೊಂದಿರೊ ಹಂತಕರು ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಹರಿರಾಮ್ ಶಂಕರ್ ಹಿರಿಯ ಅಧಿಕಾರಿಗಳ ಜೊತೆಗೆ ಸ್ಥಳ ಪರಿಶೀಲನೆ ನಡಸಿದ್ದಾರೆ. ಶ್ವಾನದಳದ ಮೂಲಕ ಕೊಲೆಯ ಜಾಡು ಹಿಡಿಯೋ ಯತ್ನ ನಡೆದಿದ್ದು, ಪರಿಚಿತರ ನಡುವೆಯೇ ಇದ್ದ ಹಣಕಾಸು ವ್ಯವಹಾರದ ಕಾರಣ ಹತ್ಯೆ ನಡೆದಿರೋ ವರದಿ ಇದ್ದು ಆರೋಪಿಗಳ ಖಚಿತ ಮಾಹಿತಿಯೂ ಇದ್ದು ಶೀಘ್ರವೇ ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ.

ಕೇವಲ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಲಿಖಿತ್ ತಾನು ಹಾಸನದ ಬಿಎಂ ರಸ್ತೆಯಲ್ಲಿ ಕಾರ್ ಸರ್ವೀಸ್ ಸ್ಟೇಷನ್ ಮಾಡಿದ್ದ. ಆದಾಯವೂ ಚೆನ್ನಾಗಿತ್ತು. ಜೊತೆಗೆ ಪತ್ನಿಗೆ ಒಂದು ಬಟ್ಟೆ ಅಂಗಡಿ ಮಾಡಿಕೊಟ್ಟು ಅಲ್ಲಿಯೂ ಒಳ್ಳೆ ದುಡಿಮೆ ಮಾಡುತ್ತಿದ್ದ. ಹಾಗಾಗಿಯೇ ಬಂದ ಹಣವನ್ನ ಬೇರೆ ವ್ಯವಹಾರಕ್ಕೆ ತೊಡಗಿಸಲು ಯೋಚನೆ ಮಾಡಿದ್ದ. ಆಗ ತನ್ನದೇ ಸ್ನೇಹಿತ ನವೀನ್ ಮೂಲಕ ಒಂದು ಟ್ಯಾಂಕರ್ ಖರೀದಿ ಮಾಡೋಕೆ ಯೋಚಿಸಿ ಮಂಗಳೂರಿನಲ್ಲಿ ಟ್ಯಾಂಕರ್ ನೋಡಿದ್ದ. 12 ಲಕ್ಷ ರೂಪಾಯಿಗೆ ವ್ಯವಹಾರದ ಮಾತನಾಡಿ ಎರಡೂವರೆ ಲಕ್ಷ ಅಡ್ವಾನ್ಸ್ ಕೂಡ ಕೊಟ್ಟಿದ್ದ. ಆದ್ರೆ ಲಾರಿ ಇಷ್ಟವಾಗದ ಕಾರಣ ವ್ಯವಹಾರ ಮುರಿದುಬಿದ್ದಿತ್ತು.

ಆಗ ತಾನು ಕೊಟ್ಟಿದ್ದ ಅಡ್ವಾನ್ಸ್ ಹಣ ವಾಪಸ್ ಕೊಡಲು ಕೇಳಿದ್ದ. ಹಣ ಪಡೆದಿದ್ದ ನವೀನ್ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣ ಕೊಡದೆ ಸತಾಯಿಸುತ್ತಿದ್ದ. ನನಗೆ ಹಣ ಬೇಕು ಎಂದು ಲಿಖಿತ್ ಪಟ್ಟು ಹಿಡಿದಾಗ ಒಂದು ಚೆಕ್ ಕೊಟ್ಟು ಸಮಯ ತಗೊಂಡಿದ್ದ. ಆದರೂ ಹಣ ಕೊಡದಿದ್ದಾಗ ಲಿಖಿತ್ ಕೋರ್ಟ್ ನಲ್ಲಿ ಚೆಕ್ ಬೌನ್ಸ್ ಕೇಸ್ ಹಾಕಿದ್ದ. ಕೇಸ್ ಹಾಕಿದ್ದರೂ ತಲೆ ಮೆರೆಸಿಕೊಂಡು ಕೋರ್ಟ್ ಗೂ ಬರದೆ ಓಡಾಡುತ್ತಿದ್ದ ನವೀನ್ 10 ದಿನಗಳ ಹಿಂದೆ ಹಾಸನದಲ್ಲಿ ಸಿಕ್ಕಾಗ ಅವನ ಬಳಿ ಇದ್ದ ಒಂದು ಬೈಕ್ ಕಿತ್ತುಕೊಂಡು ಮನೆಗೆ ತಂದಿದ್ದ ಲಿಖಿತ್.

ಆ ವೇಳೆ ಹಣ ಕೊಟ್ಟಾಗ ವಾಪಸ್ ಕೊಡೋದಾಗಿ ಹೇಳಿದ್ದ. ಆಗ ಬೇರೆ ದಾರಿಯಿಲ್ಲದೆ ಲಿಖಿತನನ್ನೇ ಮುಗಿಸೋಕೆ ಸ್ಕೆಚ್ ರೆಡಿ ಮಾಡಿದ್ದ. ನವೀನ್ ತನ್ನ ಸ್ನೇಹಿತ ಸಾಗರ್ ಮೂಲಕ ಲಿಖಿತ್​ಗೆ ಬಲೆ ಬೀಸಿದ್ದ. ಲಿಖಿತ್ ಸರ್ವೀಸ್ ಸ್ಟೇಷನ್ ಗೆ ಲಾರಿ ವಾಪಸ್ ಪಡೆಯಲೆಂದು ಹೋಗಿ ಆ ನೆಪದಲ್ಲಿ ಲಿಖಿತ್ ನನ್ನು ಪರಿಚಯ ಮಾಡಿಕೊಂಡಿದ್ದ ಸಾಗರ್ ಅವನ ವಿಶ್ವಾಸ ಗಳಿಸಿಕೊಂಡಿದ್ದ.

ಒಂದೆರಡು ಬಾರಿ ಹೊರಗೆ ಭೇಟಿ ಕೂಡ ಆಗಿದ್ದ. ಅಲ್ಲಿಗೆ ಸಾಗರ್ ಕರೆದ್ರೆ ಲಿಖಿತ್ ಹೊರಗೆ ಬರುವಷ್ಟು ವಿಶ್ವಾಸ ಮೂಡಿದಾಗ ಲಿಖಿತನನ್ನೇ ಮುಗಿಸೋಕೆ ಸ್ಕೆಚ್ ರೆಡಿ ಮಾಡಿದ್ದ. ಸಾಗರ್ ಮೂಲಕ ವ್ಯವಹಾರ ಸೆಟಲ್ ಮಾಡಿಕೊಳ್ಳೋ ಆಫರ್ ನೀಡಿ ಭಾನುವಾರ ಹೊರಗೆ ಕರೆಸಿಕೊಂಡಿದ್ದಾನೆ. ನಂತರ ಕೆಎ 41 ಎಂಎ 9231 ನಂಬರಿನ ಓಮ್ನಿ ಕಾರಿನಲ್ಲಿ ಕರೆದೊಯ್ದು ಭಾನುವಾರ ರಾತ್ರಿಯೇ ಕೊಂದು ಮುಗಿಸಿದ್ದಾರೆ.

ನೀನು ಜೀವಂತವಿದ್ದರಲ್ಲವಾ ಹಣ ಕೇಳ್ತೀಯಾ? ಎಂದು ಅವನನ್ನೇ ಮುಗಿಸಿದ್ದಾರೆ. ಮಗನ ಕಳೆದುಕೊಂಡ ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಕೇವಲ ಆರು ತಿಂಗಳ ಹಿಂದಷ್ಟೇ ಮಗಳನ್ನ ಮದುವೆ ಮಾಡಿಕೊಟ್ಟಿದ್ದ ಸಂಬಂಧಿಕರು ಗೋಳಾಡುತ್ತಿದ್ದಾರೆ. ನಂಬಿಸಿ ಕರೆದೊಯ್ದು ಹತ್ಯೆ ಮಾಡಿದ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಲಿ, ನಮ್ಮ ಮಗಳಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸಿದ್ದಾರೆ.

ಒಟ್ನಲ್ಲಿ ಕೊಟ್ಟ ಹಣ ವಾಪಸ್ ಕೇಳಿದ ಅನ್ನೋ ಒಂದೇ ಕಾರಣಕ್ಕೆ ಸ್ನೇಹಿತನನ್ನೇ ಮುಗಿಸೋಕೆ ಸ್ಕೆಚ್ ಹಾಕಿದ ದುರುಳರು ಹಣ ಕೊಡುವುದಾಗಿ ಕರೆದೊಯ್ದು ಮೋಸದಿಂದ ಇರಿದು ಕೊಂದು ಮುಗಿಸಿದ್ದಾರೆ. ಮಿಸ್ಸಿಂಗ್ ಅಂತಾ ದಾಖಲಾದ ಕೇಸ್, ಕಿಡ್ನಾಪ್ ಆಗಿ ಬದಲಾಗಿ, ಈಗ ಕೊಲೆ ಕೇಸ್ ಆಗಿ ಪರಿವರ್ತನೆ ಆಗಿದೆ. ಇನ್ನೂ ಬಾಳಿ ಬದುಕಬೇಕಿದ್ದ ನವ ವಿವಾಹಿತ ತಾನು ನಂಬಿದ ಗೆಳೆಯರ ಜೊತೆಗೆ ಮಾಡಿದ ಹಣಕಾಸು ವ್ಯವಹಾರದಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಆರೋಪಿಗಳ ಪತ್ತೆ ಬಳಿಕ ಕೊಲೆ ಹಿಂದಿನ ಅಸಲಿ ಸತ್ಯ ಬಯಲಾಗಲಿದೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ 9, ಹಾಸನ

Published On - 5:45 pm, Wed, 8 February 23