ಹಾಸನ, ಜುಲೈ. 23: ಕಾಂಗ್ರೆಸ್ ಸರ್ಕಾರ (Congress Government) ಬಂದು 14 ತಿಂಗಳಷ್ಟೇ ಪೂರೈಸಿದೆ. ಈಗಾಗಲೇ ದೇಶ, ರಾಜ ಮಟ್ಟದಲ್ಲಿ ಚರ್ಚೆ ಆಗುವಂತೆ ಹಗರಣಗಳ ಮೇಲೆ ಹಗರಣಗಳು ಬಯಲಾಗುತ್ತಿವೆ. ವಾಲ್ಮೀಕಿ ನಿಗಮ ಹಗರಣ, ಮುಡಾ ಅಕ್ರಮ ರಾಜ್ಯ ಮಟ್ಟದಲ್ಲಿ ಚರ್ಚೆಯಾದರೆ ಪ್ರವಾಸೋದ್ಯಮ ಇಲಾಖೆಯಲ್ಲಿ ಹಣ ಅಕ್ರಮ ವರ್ಗಾವಣೆ, ಕಾರ್ಮಿಕ ಇಲಾಖೆಯಲ್ಲಿ ಹಣ ಲೂಟಿ ಅಕ್ರಮಗಳು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಮತ್ತೊಂದು ಜಿಲ್ಲೆಯ ಅಕ್ರಮ ಬಯಲಾಗಿದೆ. ಹಾಸನದ (Hassan) ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಹಾಸನದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಸರ್ಕಾರದ ಅನುಮತಿ ಇಲ್ಲದೆ, ಖಾಸಗಿ ಜಾಗದಲ್ಲಿ ರಾತ್ರೋ ರಾತ್ರಿ ಕಡತ ನಾಶ ಮಾಡಿರುವ ಆರೋಪ ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ವಿರುದ್ದ ಕೇಳಿ ಬಂದಿದೆ. ದೇವರಾಜ ಅರಸು ನಿಗಮದ್ದು ಎಂದು ಹೇಳಲಾದ ದಾಖಲೆಗಳನ್ನು ಸುಡುತ್ತಿರುವ ವಿಡಿಯೋಗಳ ಸಮೇತ ಹಾಸನ ಜಿಲ್ಲಾಧಿಕಾರಿಗೆ ಗ್ರಾ.ಪಂ. ಸದಸ್ಯ, ಜೆಡಿಎಸ್ ಮುಖಂಡ ದೂರು ನೀಡಿದ್ದಾರೆ. ಈ ಮೂಲಕ ಈ ಅಕ್ರಮ ಬಯಲಾಗಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮತ್ತೊಂದು ಅಕ್ರಮ ಬಹಿರಂಗ; ಕಾರ್ಮಿಕ ಇಲಾಖೆ ಗುತ್ತಿಗೆ ನೌಕರನ ವಿರುದ್ಧ 2 ಕೋಟಿ ಹಣ ದುರ್ಬಳಕೆ ಆರೋಪ
ಕೆಲ ಮದ್ಯವರ್ತಿಗಳ ಜೊತೆ ಸೇರಿ ಸರ್ಕಾರಿ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕುರುವಂಕ ಗ್ರಾ.ಪಂ. ಸದಸ್ಯ ಬೈರಗೊಂಡನಹಳ್ಳಿಯ ಉಮೇಶ್ ಅವರು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ನಿಗಮಗಳ ಅಕ್ರಮ ಸರಣಿಯಾಗಿ ಹೊರ ಬರುತ್ತಿರುವ ಹಿನ್ನೆಲೆ ರಾತ್ರೋ ರಾತ್ರಿ ಕಡತ ನಾಶ ಮಾಡಲಾಗಿದೆ ಎಂದು ಉಮೇಶ್ ಅವರು ಡಿಸಿಗೆ ದೂರು ಸಲ್ಲಿಸಿದ್ದಾರೆ.
ಜುಲೈ 7 ರಿಂದ 10ರ ಅವಧಿಯಲ್ಲಿ ಅರಸೀಕೆರೆ ತಾಲೂಕಿನಲ್ಲಿ ಹಬ್ಬನಘಟ್ಟ ಗ್ರಾಮದ ಖಾಸಗಿ ಜಾಗದಲ್ಲಿ ಕಡತಗಳನ್ನು ಸುಟ್ಟು ನಾಶ ಮಾಡಲಾಗಿದೆ ಎಂದು ಉಮೇಶ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಲು ನಿನ್ನೆ ಡಿಸಿಗೆ ದೂರು ನೀಡಿದ್ದು ಇದೀಗ ಮತ್ತೊಂದು ಹಗರಣ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದಿದೆ. ಇದು ಯಾವ ತಿರುವು ಪಡೆದುಕೊಳ್ಳುತ್ತೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ