Tomato Theft: ರಾತ್ರೋರಾತ್ರಿ ಕೆಂಪು ಸುಂದರಿಯರ ಚೋರಿ! ರೈತನಿಗೆ ಖುಷಿಯ ಜೊತೆಗೆ ಸಂಕಷ್ಟ! ಹಾಸನದಲ್ಲಿ ಮತ್ತೆ ಏನಾಯ್ತು ಟೊಮ್ಯಾಟೋಗೆ?

| Updated By: ಸಾಧು ಶ್ರೀನಾಥ್​

Updated on: Jul 08, 2023 | 11:15 AM

ಇದ್ರಿಂದ ಆತಂಕಗೊಂಡಿರೊ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಕಾವಲು ಕಾಯುತ್ತಿದ್ದಾರೆ. ಜಮೀನಿನ ಸಮೀಪವೇ ಟೆಂಟ್ ನಿರ್ಮಿಸಿಕೊಂಡು ಪಾಳಿ ಪ್ರಕಾರ ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ.

Tomato Theft: ರಾತ್ರೋರಾತ್ರಿ ಕೆಂಪು ಸುಂದರಿಯರ ಚೋರಿ! ರೈತನಿಗೆ ಖುಷಿಯ ಜೊತೆಗೆ ಸಂಕಷ್ಟ! ಹಾಸನದಲ್ಲಿ ಮತ್ತೆ ಏನಾಯ್ತು ಟೊಮ್ಯಾಟೋಗೆ?
ರಾತ್ರೋರಾತ್ರಿ ಕೆಂಪು ಸುಂದರಿಯರ ಚೋರಿ!
Follow us on

ದಿನೇ ದಿನೆ ತರಕಾರಿ ಬೆಲೆಗಳು ಗಗನಮುಖಿಯಾಗಿ ಸಾಗುತ್ತಿವೆ. ಅದ್ರಲ್ಲೂ ಕೆಂಪು ಸುಂದರಿ ಟೊಮ್ಯಾಟೋ, ಮೆಣಸಿನಕಾಯಿ, ಬೀನ್ಸ್ ಬೆಲೆಗಳಂತೂ ಕೈಗೆಟುಕದ ವೇಗದಲ್ಲಿ ಮೇಲೇರುತ್ತಿದೆ. ಅಪರೂಪದಲ್ಲಿ ಅಪರೂಪ ಎಂಬಂತೆ ಟೊಮ್ಯಾಟೋ ಬೆಲೆ ಏರಿಕೆ ಆಗಿರೋದು ಅನ್ನದಾತರಿಗೆ ಖುಷಿಯ ಜೊತೆಗೆ ಸಂಕಷ್ಟವನ್ನು ತಂದೊಡ್ಡಿದೆ. ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿರೋದ್ರಿಂದ ಹೊಲದಿಂದಲೇ ಟೊಮ್ಯಾಟೋವನ್ನ ಕದ್ದೊಯ್ಯುತ್ತಿರೋ ಖದೀಮರು ರಾತ್ರೋ ರಾತ್ರಿ ಚೋರಿ ಮಾಡುತ್ತಿರೋದು ಅನ್ನದಾತರ ನಿದ್ದೆಗೆಡಿಸಿದೆ. ಇಷ್ಟು ದಿನ ಬೆಲೆ ಇಲ್ಲಾ ಅಂತಾ ರಸ್ತೆಗೆ ಸುರಿದು ಹೋಗ್ತಿದ್ದ ರೈತರು ಈಗ ಇರೋ ಬೆಳೆಗೆ ಒಳ್ಳೆ ಬೆಲೆ ಬಂದಿರೋದ್ರಿಂದ ಕಳ್ಳರ ಭೀತಿಯಿಂದ ಪಾರಾಗಲು ಮಳೆ ಗಾಳಿಯನ್ನು ಲೆಕ್ಕಿಸದೆ ಹಗಲು ರಾತ್ರಿ ಎನ್ನದೆ ತಮ್ಮ ಬೆಳೆ ಉಳಿಸಿಕೊಳ್ಳಲು ಕಾವಲು ಕಾಯುತ್ತಿದ್ದು ಸಿಕ್ಕಿರೋ ಬೆಲೆಯಲ್ಲಿ ಉತ್ತಮ ಲಾಭ ಮಾಡೋ ನಿರೀಕ್ಷೆಯಲ್ಲಿದ್ದಾರೆ.

ಮಾರುಕಟ್ಟೆಯಲ್ಲಿ ಗಗನಕ್ಕೇರುತ್ತಿದೆ ಟೊಮ್ಯಾಟೋ ಬೆಲೆ… ಹೊಲದಲ್ಲಿ ಬೆಳೆ ಉಳಿಸಿಕೊಳ್ಳಲು ಅನ್ನದಾತರ ಹೆಣಗಾಟ.. ಕಳ್ಳಕಾಕರಿಂದ ಬೆಳೆ ರಕ್ಷಣೆಗಾಗಿ ಹಗಲು ರಾತ್ರಿ ಬೆಳೆಗೆ ಕಾವಲು… ಮಳೆ ಗಾಳಿ, ಕಾಡು ಪ್ರಾಣಿಗಳ ಹಾವಳಿಗೂ ಕೇರ್ ಮಾಡದೆ ಬೆಳೆಗೆ ಭದ್ರತೆ ಕೊಡ್ತಿರೋ ಅನ್ನದಾತರು.. ಜಮೀನಿನ ಸಮೀಪವೇ ಟೆಂಟ್ ನಿರ್ಮಿಸಿ ಟೈಟ್ ಸೆಕ್ಯುರಿಟಿ ಕೊಡ್ತಿರೋ ರೈತರು.

ಹೌದು 15 ದಿನಗಳಿಂದ ತರಕಾರಿ ಬೆಲೆಗಳು ದಿನೇ ದಿನೆ ಗಗನಮುಖಿಯಾಗಿ ಸಾಗುತ್ತಿದೆ. ಅದ್ರಲ್ಲು ಕೆಂಪುಸುಂದರಿ ಟೊಮ್ಯಾಟೋ ಬೆಲೆಯಂತೂ ಕೈಗೆ ನಿಲುಕದ ರೀತಿಯಲ್ಲಿ ಮೇಲೇರುತ್ತಿದೆ. ಈ ಬಾರಿ ಮಳೆಯ ಮೇಲಾಟ, ಕಡಿಮೆ ಬೆಳೆಯ ಕಾರಣ ಇರೋ ಬೆಳೆಗೆ ಭರ್ಜರಿ ರೇಟ್ ಬಂದಿದೆ, ಒಂದು ಕೆಜಿಗೆ 100 ರಿಂದ 150 ರವರೆಗು ಟೊಮ್ಯಾಟೋ ಬೆಲೆ ಜಿಗಿದಿದೆ. ಹಾಗಾಗಿಯೇ ರೈತರಿಗೆ ಬಂಪರ್ ಬೆಲೆ ಸಿಕ್ಕಿರೋದು ಕೊಂಚ ನೆಮ್ಮದಿ ತರಿಸಿದ್ದರೂ ಬೆಲೆ ಏರಿಕೆಯ ಕಾರಣದಿಂದ ಹೊಲಗಳಿಗೇ ಕನ್ನ ಹಾಕ್ತಿರೋ ಕದೀಮರು ರಾತ್ರೋರಾತ್ರಿ ಬೆಳೆಯನ್ನ ಕದ್ದು ಎಸ್ಕೇಪ್ ಆಗುತ್ತಿದಾರೆ. ಇದು ಅಕ್ಷರಶಃ ಅನ್ನದಾತರ ನಿದ್ದೆಗೆಡಿಸಿದೆ.

ಎರಡು ದಿನಗಳ ಹಿಂದೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಗೋಣಿಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಟೊಮ್ಯಾಟೋವನ್ನ ಖದೀಮರು ಕದ್ದೊಯ್ದಿದ್ದರು. ಇದ್ರಿಂದ ಆತಂಕಗೊಂಡಿರೊ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಕಾವಲು ಕಾಯುತ್ತಿದ್ದಾರೆ. ಜಮೀನಿನ ಸಮೀಪವೇ ಟೆಂಟ್ ನಿರ್ಮಿಸಿಕೊಂಡು ಪಾಳಿ ಪ್ರಕಾರ ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ. ಮಳೆ ಗಾಳಿಯನ್ನುಲೆಕ್ಕಿಸದೇ ರಾತ್ರಿಯಿಡಿ ಕಾದಿದ್ದು ಅಪರೂಪದಲ್ಲಿಅಪರೂಪಕ್ಕೆ ಸಿಕ್ಕಿರೋ ಬೆಲೆಯಲ್ಲಿ ಕೊಂಚವಾದ್ರು ಲಾಭವಾಗಲಿ ಅನ್ನೋ ನಿರೀಕ್ಷೆಯೊಂದಿಗೆ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಇದನ್ನೂ ಓದಿ: ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ

ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಹಾಗು ಬೇಲೂರು ತಾಳ್ಲೂಕಿನ ಹಳೆಬೀಡು ಹೋಬಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ತರಕಾರಿ ಬೆಳೆಗಳನ್ನ ಬೆಳೆಯುತ್ತಾರೆ, ಈ ವರ್ಷ ಮಳೆಯ ಕೊರತೆ ಕಾರಣದಿಂದ ಬಹುತೇಕರು ಟೊಮ್ಯಾಟೋ ಬೆಳೆ ಮಾಡಿಲ್ಲ. ಹಾಗಾಗಿಯೇ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಹೊಲದಲ್ಲಿ ಉಳಿದ ಬೆಳೆಗೆ ಚಿನ್ನದ ಬೆಲೆ ಬಂದಿದೆ. ಹಾಗಾಗಿಯೇ 25 ಕೆಜಿಯ ಒಂದು ಬಾಕ್ಸ್ ಗೆ ರೂ. 2500 ರಿಂದ 3000ಕ್ಕೆ ಮಾರಾಟವಾಗುತ್ತಿದ್ದು ಲಕ್ಷ ಲಕ್ಷ ಆದಾಯ ರೈತರ ಕೈ ಸೇರುವಂತೆ ಮಾಡಿದೆ.

ಆದ್ರೆ ಇನ್ನೇನು ನಾಳೆಯೇ ಟೊಮ್ಯಾಟೋ ಕೊಯ್ಯಬೇಕು ಎನ್ನುವಷ್ಟರಲ್ಲಿ ರಾತ್ರೊರಾತ್ರಿ ಕಳ್ಳರು ದಾಳಿ ಮಾಡಿ ಬೆಳೆಯನ್ನೆಲ್ಲಾ ಕುಯ್ದು ಎಸ್ಕೇಪ್ ಆಗುತ್ತಿರೋದು ರೈತರನ್ನ ಆತಂಕಕ್ಕೆ ದೂಡಿದೆ. ಕಳೆದ ವರ್ಷ ಕೂಡ ಟೊಮ್ಯಾಟೋ ಬೆಳೆಯನ್ನೇ ಬೆಳೆದಿದ್ದಿವಿ. ಆಗ ನಮ್ಮನ್ನ ಕೇಳೋರೇ ಇರಲಿಲ್ಲಾ. ರಾಶಿ ರಾಶಿ ಟೊಮ್ಯಾಟೋವನ್ನ ರಸ್ತೆಗೆ ಸುರಿದು ಬಂದಿದ್ದೆವು, ಆದ್ರೆ ಈ ವರ್ಷ ಕೊಂಚ ಬೆಲೆ ಏರಿಕೆಯಾಗಿ ಕೈಗೊಂದಷ್ಟು ಆದಾಯ ಬರೋ ಕನಸು ಚಿಗುರಿರುವಾಗ ಖದೀಮರ ಕಾಟ ಎಲ್ಲರನ್ನ ಕಂಗೆಡಿಸಿದೆ.

ಇನ್ನು ಕಟಾವು ಮಾಡದೆ ಬಿಟ್ಟರೆ ಮಳೆಯ ಕಾರಣದಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತೆ, ಕಟಾವು ಮಾಡಿದ್ರೆ ಸಾಗಾಟ ಮಾಡೊ ನಡುವೆಯೇ ಫಸಲನ್ನು ಎಗರಿಸೋ ಆತಂಕ ಇದೆ. ಹಾಗಾಗಿಯೇ ಬೇರೆ ದಾರಿಯಿಲ್ಲದೆ ರೈತರು ತಮ್ಮ ಬೆಳೆ ರಕ್ಷಣೆಗಾಗಿ ಕಾವಲು ಕಾಯೋ ಕಾಯಕಕ್ಕೆ ಮೊರೆ ಹೋಗಿದ್ದು ರೈತರಿಗೆ ಸರ್ಕಾರ ನೆರವಿಗೆ ಬರಲಿ, ಅಪರೂಪದಲ್ಲಿ ಸಿಕ್ಕಿರೋ ಬೆಲೆ ರೈತರಿಗೆ ಲಭಿಸುವಂತೆ ಮಾಡಲಿ ಎಂದು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಹಲವು ವರ್ಷಗಳ ಬಳಿಕ ಟೊಮ್ಯಾಟೋ ಬೆಳೆದ ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ, ಆದ್ರೆ ಹೊಲದಲ್ಲಿರೋ ಬೆಳೆಯನ್ನ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಿ ಲಕ್ಷ ಲಕ್ಷ ಆದಾಯ ಕೈಸೇರೋ ಮೊದಲೇ ಹೊಲಕ್ಕೆ ಕನ್ನ ಹಾಕ್ತಿರೋ ಖದೀಮರ ಕಾಟ ಅನ್ನದಾತರ ಆದಾಯಕ್ಕೆ ಕೊಡಲಿ ಪೆಟ್ಟು ಕೊಡ್ತಿದ್ದು ರೈತರು ಪರದಾಡುವಂತೆ ಮಾಡಿದೆ. ದಿನೇ ದಿನೆ ಹೆಚ್ಚಾಗುತ್ತಿರೋ ಕಳ್ಳರ ಕಾಟ ತಡೆಗೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಲಿ ಎನ್ನೋದು ರೈತ ಸಮುದಾಯದ ಒತ್ತಾಯವಾಗಿದೆ.

ಮಂಜುನಾಥ್.ಕೆ.ಬಿ.

Published On - 11:13 am, Sat, 8 July 23