
ಹಾಸನ, ನವೆಂಬರ್ 27: ತಂಗಿ ಮದುವೆ ಹಿನ್ನಲೆ ಆರತಕ್ಷತೆ ಕಾರ್ಯಕ್ರಮಕ್ಕೆಂದು ಹಾಲು-ಮೊಸರು ತಲರಲು ಹೋದ ಅಣ್ಣ ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಲೋಕೇಶ್ (25) ಮತ್ತು ಆತನ ಸಂಬಂಧಿ ಕಿರಣ್ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ತಂಗಿ ಮದುವೆ ಮುಗಿಸಿ ಬಂದಿದ್ದ ಲೋಕೇಶ್, ಆರತಕ್ಷತೆ ಕಾರ್ಯಕ್ರಮಕ್ಕಾಗಿ ತಯಾರಿ ಮಾಡುತ್ತಿದ್ದರು. ಬೆಳಗ್ಗೆ ಹೋಗಿ ಹಾಲು ಮತ್ತು ಮೊಸರು ತರಲು ಸಮಯ ಸಿಗಲ್ಲ ಎಂದು ರಾತ್ರಿ ಸಂಬಂಧಿ ಕಿರಣ್ ಜೊತೆ ಬೇಲೂರು ಪಟ್ಟಣಕ್ಕೆ ಬಂದಿದ್ದರು. ಆದರೆ ಅವರಿಬ್ಬರೂ ಹಿಂದಿರುಗಿ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ರಸ್ತೆ ಬಳಿಯೇ ಲೋಕೇಶ್ ಮತ್ತು ಕಿರಣ್ ಮೃತದೇಹ ಪತ್ತೆಯಾಗಿವೆ. ವೇಗವಾಗಿ ಬಂದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ವಿದ್ಯುತ್ ಕಂಬವೇ ತುಂಡಾಗಿರೋದು ಕಂಡುಬಂದಿದೆ.
ಇದನ್ನೂ ಓದಿ: ಬೆಳಗ್ಗೆ ನಮಾಜ್ಗೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು
ಮನೆ ಮಗಳ ಮದುವೆ ಬಳಿಕ ಆರತಕ್ಷತೆಯನ್ನು ಊರಲ್ಲಿಯೇ ಮಾಡಬೇಕೆಂದು ನಿರ್ಧರಿಸಿದ್ದ ಲೋಕೆಶ್ ಕುಟುಂಬ ಅದಕ್ಕೆ ಅಗತ್ಯ ಸಿದ್ಧತೆಯನ್ನೂ ನಡೆಸಿತ್ತು. ಆದ್ರೆ ವಿಧಿ ಆಟ ಬೇರೆಯದೇ ಇತ್ತು. ಇನ್ನೇನು ಸ್ವಲ್ಪ ದೂರ ತೆರಳಿದರೆ ಇವರು ಮನೆ ತಲುಪುತಿದ್ದರು ಎನ್ನುವ ವೇಳೆ ಅಪಘಾತ ನಡೆದಿದೆ. ರಾತ್ರಿ ವೇಳೆಯಾದ್ದರಿಂದ ಘಟನೆ ಯಾರ ಗಮನಕ್ಕೂ ಬಾರದೆ ಗಂಭೀರ ಗಾಯಗೊಂಡಿದ್ದ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೂ ಘಟನೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನಲೆ ಸ್ಥಳಕ್ಕೆ ಸೂಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಾಸನದ ಹಿಮ್ಸ್ನಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಮಕ್ಕಳ ಕಳೆದುಕೊಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:15 pm, Thu, 27 November 25