ಬೆಳಗ್ಗೆ ನಮಾಜ್ಗೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮೈಸೂರು ಜನ
ಅವರೆಲ್ಲಾ ಒಂದೇ ಏರಿಯಾದವರು. ಸಾಲದ್ದಕ್ಕೆ ದೋಸ್ತಿಗಳು. ಏರಿಯಾದಲ್ಲಿ ಸುತ್ತಾಡ್ಕೊಂಡು ಗಾಂಜಾ ನಶೆಯಲ್ಲಿ ತೇಲ್ತಾ ಇದ್ದವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜೊತೆಯಲ್ಲಿದ್ದವನನ್ನೇ ಇರಿದು ಕೊಂದಿದ್ದಾರೆ. ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ನಡೆದ ಭಯಾನಕ ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಮೈಸೂರು, ನವೆಂಬರ್ 27: ಸಾಂಸ್ಕೃತಿಕ ನಗರಿ ಮೈಸೂರು (Mysuru) ಬುಧವಾರ ಬೆಳ್ಳಂಬೆಳಗ್ಗೆಯೇ ಬೆಚ್ಚಿಬೀಳುವಂತಾಗಿದೆ. ಮೈಸೂರಿನ ಶಾಂತಿನಗರದ ಮಹಾಮದೀಯ ಮಸೀದಿ ಬಳಿಯ ಚೌಂಕಂಡಿ ಬಳಿ ಭೀಕರ ಕೊಲೆ ನಡೆದಿದೆ. ಶಾಂತಿ ನಗರದ ನಿವಾಸಿ ಸೈಯದ್ ಸೂಫಿಯನ ಕೊಲೆಯಾದ ಯುವಕ. ಈತ ಸ್ನೇಹಿತರಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ತಡರಾತ್ರಿ ಜೊತೆಗೆ ಇದ್ದ ಸೂಫಿಯಾನ ಸ್ನೇಹಿತರಾದ ಮೊಹಮ್ಮದ್ ಸಾಕಿಬ್, ರಾಹಿಲ್ ಅನ್ನೋ ಯುವಕರರು ಸೂಫಿಯನನನ್ನ ಶಾಂತಿ ನಗರದಲ್ಲಿ ಅಟ್ಟಾಡಿಸಿಕೊಂಡು ಕೊಂದಿದ್ದಾರೆ. ಮೃತ ಸೊಫಿಯಾನ, ಮೊಹಮ್ಮದ್ ಸಾಕಿಬ್, ರಾಹಿಲ್ ಎಲ್ಲರೂ ಒಂದೇ ಏರಿಯಾದವರು. ಎಲ್ಲಾ ಒಟ್ಟಿಗೆ ಇದ್ದವರು. ಬೆಳಗ್ಗೆ ನಮಾಜ್ಗೆಗೆ ಬಂದ ಸ್ನೇಹಿತನನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ.
ಇನ್ನು ಪ್ರಾಥಮಿಕ ಮಾಹಿತಿ ಪ್ರಕಾರ, ಮೊಹಮ್ಮದ್ ಸಾಕಿಬ್ ಅಣ್ಣನ ಮೇಲೆ ಸೋಫಿಯಾನ ಹಲವು ದಿನಗಳ ಹಿಂದೆ ಹಲ್ಲೆ ಮಾಡಿದ್ದನಂತೆ. ಈ ವಿಚಾರದಲ್ಲಿ ಮೊಹಮದ್ ಸಾಕಿಬ್, ಸೋಫಿಯಾನ ನಡುವೆ ವೈಮನಸ್ಸು ಉಂಟಾಗಿತ್ತಂತೆ. ತಡರಾತ್ರಿಯೂ ಗಲಾಟೆ ನಡೆದಿತ್ತು ಎನ್ನಲಾಗಿದೆ. ಏರಿಯಾದಲ್ಲಿ ಗಾಂಜಾ, MDMA ಕೂಡ ಎಗ್ಗಿಲ್ಲದೆ ಸಿಗ್ತಾ ಇದ್ದು, ಎಲ್ಲೂ ನಶೆಯಲ್ಲೇ ಇದ್ದರು ಎನ್ನಲಾಗಿದೆ. ತಡರಾತ್ರಿ ಜೊತೆಗೆ ಇದ್ದು ಗಲಾಟೆ ಮಾಡ್ಕೊಂಡು ಹೋದವರು ಬೆಳಿಗ್ಗೆಯೇ ನಮಾಜ್ಗೆ ಎಂದು ಬಂದವನನ್ನು ಕಾದು ಕುಳಿತು ಕೊಲೆ ಮಾಡಿದ್ದಾರೆ. ಮೊಹಮ್ಮದ್ ಸಾಕಿಬ್, ರಾಹಿಲ್ ಇಬ್ಬರೂ ಸೇರಿ ಅಟ್ಟಾಡಿಸಿಕೊಂಡು ಕೊಂದಿದ್ದಾರೆ.
ಸಿಸಿಟಿವಿ ವಿಡಿಯೋ
ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ರಾಜ್ಯ ಸರ್ಕಾರ ಕಿಡಿಗೇಡಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ: ಸಂಸದ ಯದುವೀರ್ ವಾಗ್ದಾಳಿ
ಯುವಕನ ಕೊಲೆ ವಿಚಾರವಾಗಿ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ, ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕಿಡಿಗೇಡಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಒಂದು ಕಾಲದಲ್ಲಿ ಮೈಸೂರಿಗೆ ಪೋಲೀಸರ ಅವಶ್ಯಕತೆ ಇರಲಿಲ್ಲ. ಮೈಸೂರು ಶಾಂತಿಗೆ ಹೆಸರುವಾಸಿಯಾಗಿತ್ತು. ಇಂದು ಮೈಸೂರಿಗೆ ಇಂತಹ ಪರಿಸ್ಥಿತಿ ಬಂದಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಘಟನೆ ನಂತರ ತಿಂಗಳಿಗೊಂದರಂತೆ ಕಾನೂನು ಸುವ್ಯವಸ್ಥೆ ವಿಫಲತೆಯಾಗುತ್ತಿದೆ. ಈಗ ಮತ್ತೊಂದು ಕೊಲೆ ನಡೆದಿದೆ. ಇತ್ತೀಚೆಗಷ್ಟೇ ಅರಮನೆ ಮುಂಭಾಗ ಕೊಲೆ ಪ್ರಕರಣಗಳು ನಡೆದಿದ್ದವು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗದಗ: ತಲ್ವಾರ್, ಚಾಕುವಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಭಯಾನಕ ಘಟನೆಯ ವಿಡಿಯೋ ವೈರಲ್
ಮೈಸೂರು ಡ್ರಗ್ಸ್ ಮಾರಾಟ ಹಾಗೂ ಉತ್ಪಾದನೆ ಕೇಂದ್ರವಾಗಿದೆ. ಮೈಸೂರಿನಲ್ಲೇ ಶೆಡ್ ಹಾಕಿ ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದರು ಎಂದು ಯದುವೀರ್ ಹೇಳಿದ್ದಾರೆ.



