ಹಾಸನ, ಫೆ.5: ರೈಲ್ವೆ ಮೇಲ್ಸೇತುವೆ ವಿಚಾರವಾಗಿ ಹಾಸನ (Hassan) ಜಿಲ್ಲಾಡಳಿತ ಮತ್ತು ರೈಲ್ವೆ ಇಲಾಖೆ ನಡುವಿನ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತ, ಮೇಲ್ಸೇತುವೆಗೆ ಹಾಕಿದ್ದ ತಡೆಯನ್ನು ರಾತ್ರೋರಾತ್ರಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಮಾಡಿಕೊಟ್ಟಿದೆ.
ಹಾಸನದ ಎನ್ ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯ ಎರಡು ಪಥದ ರಸ್ತೆಯ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದೆ. ಆದರೂ ರೈಲ್ವೆ ಇಲಾಖೆ ಕುಂಟುನೆಪಹೇಳಿ ಸಂಚಾರ ಬಂದ್ ಮಾಡಿತ್ತು. ಏಕಕಾಲದಲ್ಲಿ ಮೇಲ್ಸೇತುವೆ ಹಾಗೂ ಲೆವೆಲ್ ಕ್ರಾಸಿಂಗ್ ಚಾಲನೆಯಲ್ಲಿ ಇರಬಾರದು ಎಂಬ ನಿಯಮ ಮುಂದಿಟ್ಟು ಸಂಚಾರ ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ವ್ಹೀಲಿಂಗ್, ವಾಹನ ಸವಾರರಿಗೆ ಫಜೀತಿ
ಸುಮಾರು 20 ದಿನಗಳ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ನಡುವಿನ ಮುಸುಕಿನ ಗುದ್ದಾಟಕ್ಕೆ ಇದೀಗ ತೆರೆಬಿದ್ದಿದೆ. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ತಮ್ಮ ಅಧಿಕಾರ ದಂಡ ಬಳಸಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ ಗೊಳಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸಂಚಾರಕ್ಕೆ ಮುಕ್ತ ಗೊಳಿಸಿದ್ದ ರಸ್ತೆಯನ್ನ ಬಂದ್ ಮಾಡಿದ್ದ ಹಿನ್ನೆಲೆ ಜನರ ಆಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ ಎನ್ನೋ ಆದಾರದ ಮೇಲೆ ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತವು ರೈಲ್ವೆ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಿಕೊಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 pm, Mon, 5 February 24