ಹಾಸನ: ಮನೆಯೊಂದರಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ನಯಾಜ್ ಹಾಗೂ ಮುಜಾಹಿದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಸಂಗ್ರಹ ಮಾಡಿದ್ದ ಅರ್ಧ ಕೆಜಿ ಸಲ್ಫರ್ ಪೌಡರ್, ಎರಡು ಕೆಜಿ ದಾರ ಜಪ್ತಿ ಮಾಡಲಾಗಿದೆ. ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ದಾಳಿ ಮಾಡಿದ್ದು,
ಸ್ಫೋಟಕ ನಿರ್ಬಂಧಕ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ. ನಾಗರಹಾವಿನ ಜೊತೆ ಆಟ ಆಡಲು ಹೋಗಿ ಉರಗ ತಜ್ಞ ಕಚ್ಚಿಸಿಕೊಂಡಂತಹ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಿನ್ನೆ ನಡೆದಿದೆ. ಅಲೆಕ್ಸ್ ಹಾವಿನಿಂದ ಕಚ್ಚಿಸಿಕೊಂಡ ಉರಗ ತಜ್ಞ. ಖಾಸಗಿ ಆಸ್ಪತ್ರೆಯಲ್ಲಿ ಅಲೆಕ್ಸ್ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಹಾವಿನಿಂದ ಕಚ್ಚಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಾಕಾನೆ ದಾಳಿಗೆ ಕಾರ್ಮಿಕ ಬಲಿ
ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿಯಾಗಿರುವಂತಹ ಘಟನೆ ಬೆಳ್ಳಂಬೆಳಗ್ಗೆ ಸೋಮವಾರಪೇಟೆ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ. ಹಾಡಿ ನಿವಾಸಿ ಬಸಪ್ಪ (28)ಮೃತ ವ್ಯಕ್ತಿ. ಮನೆಯಿಂದ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಸಾಕಾನೆ ನಂಜುಂಡ ದಾಳಿ ಮಾಡಿದೆ. ಸ್ಥಳಕ್ಕೆ ತೆರಳಿದ ಮಾವುತನ ಮೇಲೂ ಸಾಕಾನೆ ದಾಳಿ ಮಾಡಿದೆ. ಪ್ರಾಣಾಪಾಯದಿಂದ ಮಾವುತ ಪಾರಾಗಿದ್ದಾನೆ. ಬಸಪ್ಪ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಸಪ್ಪ ಸಾವನ್ನಪ್ಪಿದ್ದಾನೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ತುಮಕೂರು: ಮನೆಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹುಲಿಯೂರು ದುರ್ಗದ ಹಳೇಪೇಟೆ ನಿವಾಸಿಗಳಾದ ಅಪ್ರೋಜ್(20), ಫೈರೋಜ್ ಖಾನ್(22) ಬಂಧಿತರು. 47 ಗ್ರಾಂ ಚಿನ್ನದ ಒಡವೆ, 420 ಗ್ರಾಂ ಬೆಳ್ಳಿ ಹಾಗೂ 25 ಸಾವಿರ ನಗದು, ಬೈಕ್ ಜಪ್ತಿ ಮಾಡಲಾಗಿದೆ.
ಮಗುವಿನೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ
ಹಾಸನ: ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಬಳಿ ಮಗುವಿನೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. 8 ತಿಂಗಳ ಮಗು ಸಾವನ್ನಪ್ಪಿದ್ದು, ತಾಯಿ ನಯನಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡ ನಯನಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
ಯಾದಗಿರಿ: ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ. ಗಾಜರಕೋಟ ಗ್ರಾಮದ ಮೋನಮ್ಮ (25) ಭಾನು (4) ಶ್ರೀನಿವಾಸ್ (2), ಎಸ್ ಹೊಸಹಳ್ಳಿ ಗ್ರಾಮ ಸಾಬಣ್ಣ (17) ಮೃತ ದುರ್ದೈವಿಗಳು. ಓರ್ವ ಯುವಕನಿಗೆ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ಹೋಗುವಾಗ ಸುರಿದ ಮಳೆಯಿಂದಾಗಿ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.