ಹಾಸನ: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದೆ(Karnataka Rains). ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗ್ತಿದ್ದು, ಸರಣಿ ಅವಾಂತರಗಳೇ ನಡೆದಿದೆ. ಗುಡ್ಡಗಳು ಕುಸಿದು ಬೀಳುತ್ತಿವೆ. ರಸ್ತೆ, ಮನೆಗಳು, ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದೆ. ಸೇತುವೆಗಳು ಮುಳುಗಿ ಹೋಗಿವೆ. ಎಲ್ಲೆಂದ್ರಲ್ಲಿ ನೀರು ನುಗ್ಗಿ ಜನರು ನರಕಯಾತನೆ ಪಡ್ತಿದ್ದಾರೆ. ಮನೆಯಿಂದ ಹೊರ ಬರೋಕೂ ಆಗದೆ ಒದ್ದಾಡ್ತಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಾಸನ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು ಹಾಸನ ಜಿಲ್ಲೆಯ ವಿಶ್ವ ವಿಖ್ಯಾತ ವಿಂಧ್ಯಗಿರಿ(Vindhyagiri) ಬೆಟ್ಟದಲ್ಲಿ ಕೋಟೆ ಕುಸಿದಿದೆ.
ಶಾಂತ ಮೂರ್ತಿ ಬಾಹುಬಲಿ ಸ್ವಾಮಿ ನೆಲೆಸಿರೋ ಬೆಟ್ಟದಲ್ಲಿ ಭಾರೀ ಮಳೆಗೆ ಕೋಟೆ ಕುಸಿದಿದೆ. ಕೋಟೆ ಕುಸಿದ ಪರಿಣಾಮ ಬೆಟ್ಟದಿಂದ ಬೃಹದಾಕಾರದ ಕಲ್ಲುಗಳು ಕೆಳಗುರುಳಿ ಬಂದಿದ್ದು ಭಾರೀ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಶಾಸಕ ಬಾಲಕೃಷ್ಣ ಭೇಟಿ ನೀಡಿದ್ದಾರೆ. ಘಟನೆ ನಡೆದು ಐದಾರು ಗಂಟೆ ಕಳೆದರೂ ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಬಂದಿಲ್ಲ. ಈ ಹಿನ್ನೆಲೆ ಅಧಿಕಾರಿಗಳ ವಿರುಧ್ಧ ಆಕ್ರೋಶ ವ್ಯಕ್ತವಾಗಿದೆ. ಏನಾದ್ರು ಅನಾಹುತ ಆದರೆ ಅವರೇ ಹೊಣೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಕೋಟೆಯ ಎರಡು ಕಡೆ ಕಲ್ಲುಗಳು ಕುಸಿದಿವೆ. ಇಂದು ಮತ್ತೆ ಮಳೆಯಾದೆ ಭಾರೀ ಅಪಾಯದ ಆತಂಕ ಉಂಟಾಗಿದೆ. ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ.
ಇನ್ನು ಹಾಸನ-ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿ ಕೋಟೆ ಕುಸಿತವಾದ ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭೇಟಿ ನೀಡಿದ್ದಾರೆ. ಅವರ ಜೊತೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಶೀಘ್ರ ದುರಸ್ಥಿ ಕಾರ್ಯ ಆರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಳೆ ಹೆಚ್ಚಾಗಿ ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಅಪಾಯದಲ್ಲಿರುವಂತಹ ಮನೆಯವರ ಸ್ಥಳಾಂತರಕ್ಕೂ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಆರ್ ಗಿರೀಶ್, ಸಿಇಓ ಕಾಂತರಾಜ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
Published On - 3:07 pm, Wed, 3 August 22