ಕಾಡಾನೆಗಳ ಕಾಟಕ್ಕೆ ಬೆಚ್ಚಿದ ಬೇಲೂರು ಮಂದಿ: ಒಂಟಿ ಸಲಗದ ದಾಳಿಗೆ ದನ ಮೇಯಿಸಲು ಹೋಗಿದ್ದ ಮಹಿಳೆ ಬಲಿ

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಶಾವರ ಬಳಿ ದನ ಮೇಯಿಸಲು ತೆರಳಿದ್ದ ಮಹಿಳೆ ಒಂಟಿ ಸಲಗದ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕೋರಿ ಗ್ರಾಮಸ್ಥರು ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಇವೆಲ್ಲದರ ನಡುವೆ ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕಾಡಾನೆಗಳ ಕಾಟಕ್ಕೆ ಬೆಚ್ಚಿದ ಬೇಲೂರು ಮಂದಿ: ಒಂಟಿ ಸಲಗದ ದಾಳಿಗೆ ದನ ಮೇಯಿಸಲು ಹೋಗಿದ್ದ ಮಹಿಳೆ ಬಲಿ
ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷ
Edited By:

Updated on: Nov 15, 2026 | 9:33 AM

ಹಾಸನ, ನವೆಂಬರ್​​ 15: ಕಾಡಾನೆ ದಾಳಿಗೆ ದನ ಮೇಯಿಸಲು ತೆರಳಿದ್ದ ಮಹಿಳೆ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ನಡೆದಿದೆ. ಚೌಡನಳ್ಳಿಯ ಜಯಮ್ಮ(48) ಮೃತ ದುರ್ದೈವಿಯಾಗಿದ್ದು, ಒಂದು ವಾರದಿಂದ ಗ್ರಾಮದ ಬಳಿ ಕಾಡಾನೆಗಳು ಬೀಡುಬಿಟ್ಟಿದ್ದವು. ಆ ಪೈಕಿ ಗುಂಪಿನಿಂದ ಬೇರ್ಟಪಟ್ಟಿರುವ ಒಂಟಿಸಲಗ ಜಯಮ್ಮ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಿಳೆಯ ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ

ಇನ್ನು ಕಾಡಾನೆ ದಾಳಿಗೆ ಮಹಿಳೆ ಜಯಮ್ಮ ಬಲಿಯಾದ ಬೆನ್ನಲ್ಲೇ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಘಟನೆ ನಡೆದು 12 ಗಂಟೆಗಳಾದರು ಸ್ಥಳೀಯ ಶಾಸಕರೂ ಬಂದಿಲ್ಲ. ಪ್ರತಿಬಾರಿ ಸಾವು ಆದಾಗ ಅಧಿಕಾರಿಗಳು ಚೆಕ್ ಕೊಟ್ಟು ಹೋಗ್ತಾರೆ. ರೈತರು ನಿತ್ಯ ಆತಂಕದಲ್ಲಿ ದಿನ ದೂಡುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಲೇ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Loading...

ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವ: ಹುಂಡಿ ಹಣ, ಟಿಕೆಟ್​​, ಪ್ರಸಾದ ಸೇರಿ ದೇಗುಲಕ್ಕೆ ಒಟ್ಟು 29.55 ಕೋಟಿ ಆದಾಯ

ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷ

ಇವೆಲ್ಲದರ ನಡುವೆ ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಹಿಳೆ ಬಲಿ ಪಡೆದಿದ್ದ ಒಂಟಿ ಸಲಗ ಮರಳಿ ಗುಂಪು ಸೇರಿಕೊಂಡಿದ್ದು, ಕಾಡಾನೆಗಳ ಸಂಚಾರ ಬಗ್ಗೆ ಚೌಡನಹಳ್ಳಿ, ಕುಶಾವರ, ಬಕ್ರವಳ್ಳಿ ಭಾಗದ ಜನರಿಗೆ ಆನೆ ಕಾರ್ಯ ಪಡೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ನಿತ್ಯ ಕಾಡಾನೆಗಳ ಸಂಚಾರದಿಂದ ಆತಂಕಗೊಂಡಿರುವ ಗ್ರಾಮಸ್ಥರು ಘಟನೆಯಿಂದ ಮತ್ತಷ್ಟು ಭಯಭೀತರಾಗಿದ್ದು, ಇದೆಕ್ಕೆಲ್ಲ ಯಾವಾಗ ಮುಕ್ತಿ ಸಿಗಲಿದೆ ಎಂದು ಅರಣ್ಯ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us