AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ದರ್ಶನೋತ್ಸವ: ಹುಂಡಿ ಹಣ, ಟಿಕೆಟ್​​, ಪ್ರಸಾದ ಸೇರಿ ದೇಗುಲಕ್ಕೆ ಒಟ್ಟು 29.55 ಕೋಟಿ ಆದಾಯ

ಹಾಸನಾಂಬೆ ದರ್ಶನೋತ್ಸವ 2026ರ ಹುಂಡಿ ಎಣಿಕೆ ಪೂರ್ಣಗೊಂಡಿದ್ದು, ಹುಂಡಿ ಹಣ, ಟಿಕೆಟ್ ಮತ್ತು ಲಡ್ಡು ಪ್ರಸಾದ ಸೇರಿ ದೇಗುಲಕ್ಕೆ ದಾಖಲೆಯ 29.55 ಕೋಟಿ ರೂ. ಆದಾಯ ಬಂದಿದೆ. ಈ ಬಾರಿ ಒಟ್ಟು 30.06 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 43 ಗ್ರಾಂ ಚಿನ್ನಾಭರಣ, 1 ಕೆಜಿ 255 ಗ್ರಾಂ ಬೆಳ್ಳಿಯ ಆಭರಣಗಳನ್ನು ಕೂಡ ಕಾಣಿಕೆಯಾಗಿ ಭಕತರು ದೇವಿಗೆ ನೀಡಿದ್ದಾರೆ.

ಹಾಸನಾಂಬೆ ದರ್ಶನೋತ್ಸವ: ಹುಂಡಿ ಹಣ, ಟಿಕೆಟ್​​, ಪ್ರಸಾದ ಸೇರಿ ದೇಗುಲಕ್ಕೆ ಒಟ್ಟು 29.55 ಕೋಟಿ ಆದಾಯ
ಹಾಸನಾಂಬೆ ದೇಗುಲ
ಮಂಜುನಾಥ ಕೆಬಿ
| Edited By: |

Updated on: Nov 12, 2026 | 6:50 PM

Share

ಹಾಸನ, ನವೆಂಬರ್​​ 13: ಹಾಸನಾಂಬೆ ದರ್ಶನೋತ್ಸವ ಅಂತ್ಯಗೊಂಡ ಬೆನ್ನಲ್ಲೇ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 3 ಕೋಟಿ 71 ಲಕ್ಷ ಹಣ ಸಂಗ್ರಹವಾಗಿದೆ. ಟಿಕೆಟ್​​ ಮತ್ತು ಲಡ್ಡು ಪ್ರಸಾದಿಂದ 25.82 ಕೋಟಿ ಸಂಗ್ರಹವಾಗಿದ್ದು, ಒಟ್ಟು 29.55 ಕೋಟಿ ಆದಾಯ ದೇಗುಲಕ್ಕೆ ಬಂದಿದೆ. ಆ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 4 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. 2025ರಲ್ಲಿ ಎಲ್ಲ ಮೂಲಗಳಿಂದ 25.59 ಕೋಟಿ ರೂ. ಸಂಗ್ರಹವಾಗಿತ್ತು ಎಂದು ದೇಗುಲದ ಆಡಳಿತ ಅಧಿಕಾರಿ ಜಗದೀಶ್ ಗಂಗಣ್ಣನವರ್ ಮಾಹಿತಿ ನೀಡಿದ್ದಾರೆ.

43 ಗ್ರಾಂ ಚಿನ್ನಾಭರಣ, 1 ಕೆಜಿ 255 ಗ್ರಾಂ ಬೆಳ್ಳಿಯ ಆಭರಣ

2025ರಲ್ಲಿ 25.36 ಲಕ್ಷ ಭಕ್ತರು ದರ್ಶನ ಮಾಡಿದ್ದರೆ, 2026ರಲ್ಲಿ30.06 ಲಕ್ಷ ಭಕ್ತರು ಹಾಸನಾಂಬೆಯನ್ನು ಕಣ್ತುಂಬಿಕೊಂಡಿದ್ದಾರೆ. 43 ಗ್ರಾಂ ಚಿನ್ನಾಭರಣ, 1 ಕೆಜಿ 255 ಗ್ರಾಂ ಬೆಳ್ಳಿಯ ಆಭರಣಗಳನ್ನು ಕೂಡ ಕಾಣಿಕೆಯಾಗಿ ಭಕತರು ದೇವಿಗೆ ನೀಡಿದ್ದಾರೆ. ಕಂದಾಯ ಇಲಾಖೆಯ 500 ಸಿಬ್ಬಂದಿ, 50 ಸ್ಕೌಟ್ಸ್ ಅಂಡ್ ಗೈಡ್ಸ್ ಸಿಬ್ಬಂದಿ ಸೇರಿ ಒಟ್ಟು 600 ಮಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಿಂಗಾಪುರ, ಓಮನ್, ಬಹ್ರೇನ್, ಅಮೆರಿಕಾ, ಯುಎಇ, ಚೀನಾ ಕರೆನ್ಸಿಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ಆಚರಿಸುತ್ತೇವೆ: ಸಚಿವ ಕೆಎಂ ಶಿವಲಿಂಗೇಗೌಡ

2026ನೇ ಸಾಲಿನ ಹಾಸನಾಂಬೆ ಉತ್ಸವವು ಅಕ್ಟೋಬರ್ 29ರಿಂದ ನವೆಂಬರ್ 11 ರವರೆಗೆ ಒಟ್ಟು 14 ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ. ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ಅವಕಾಶವಿರಲಿಲ್ಲ. ಅಕ್ಟೋಬರ್ 29ರ ಗುರುವಾರ ದೇಗುಲದ ಗರ್ಭಗುಡಿ ಬಾಗುಲು ತೆರೆದಿದ್ದು, ಸಾರ್ವಜನಿಕ ದರ್ಶನಕ್ಕೆ ಅಕ್ಟೋಬರ್ 30ರಿಂದ ನವೆಂಬರ್ 10ರ ವರೆಗೆ ಒಟ್ಟು 12 ದಿನಗಳ ಕಾಲ ಅವಕಾಶ ನೀಡಲಾಗಿತ್ತು. ನವೆಂಬರ್ 11ರ ಬುಧವಾರ ಮಧ್ಯಾಹ್ನ ಸಾಂಪ್ರದಾಯಿಕ ಪೂಜೆಗಳೊಂದಿಗೆ ದೇಗುಲದ ಬಾಗಿಲು ಮುಚ್ಚಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More