ಕತ್ತರಿಸಿ ಬಿದ್ದ ವಿದ್ಯುತ್ ತಂತಿ, ಹೊತ್ತಿ ಉರಿದ 15 ಲಕ್ಷಕ್ಕೂ ಅಧಿಕ ಮೌಲ್ಯದ ಫಸಲಿನ ರಾಶಿ

|

Updated on: Feb 24, 2023 | 7:04 PM

ವಿದ್ಯುತ್ ತಂತಿ ಕತ್ತರಿಸಿ ಬಿದ್ದು ಮೆಕ್ಕೆಜೋಳ, ಸಾವಿ, ಭತ್ತದ ರಾಶಿ ಸುಟ್ಟು ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.

ಕತ್ತರಿಸಿ ಬಿದ್ದ ವಿದ್ಯುತ್ ತಂತಿ, ಹೊತ್ತಿ ಉರಿದ 15 ಲಕ್ಷಕ್ಕೂ ಅಧಿಕ ಮೌಲ್ಯದ ಫಸಲಿನ ರಾಶಿ
ಹೊತ್ತಿ ಉರಿದ ಮೆಕ್ಕೆಜೋಳ
Follow us on

ಹಾವೇರಿ: ವಿದ್ಯುತ್ ತಂತಿ ಕತ್ತರಿಸಿ ಬಿದ್ದು ಮೆಕ್ಕೆಜೋಳ, ಸಾವಿ, ಭತ್ತದ ರಾಶಿ (crops) ಸುಟ್ಟು ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು, 400 ಕ್ವಿಂಟಾಲ್ ಮೆಕ್ಕೆಜೋಳ, 20 ಕ್ವಿಂಟಾಲ್ ಸಾವಿ ರಾಶಿ, 10 ಕ್ವಿಂಟಾಲ್ ಭತ್ತದ ರಾಶಿ ಧಗಧಗನೆ ಹೊತ್ತಿ ಉರಿದಿವೆ. ರಮೇಶ ಧರ್ಮಣ್ಣನವರ್, ಪವಿತ್ರಾ ಧರ್ಮಣ್ಣನವರ್, ಮಂಜುನಾಥ ಎಂಬುವರಿಗೆ ಫಸಲಿನ ರಾಶಿಗಳು ಸೇರಿವೆ. ಸುಮಾರು 15ಕ್ಕೂ ಅಧಿಕ ಲಕ್ಷ ಮೌಲ್ಯದ ಫಸಲು ಬೆಂಕಿಗೆ ಆಹುತಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಅಗ್ನಿ ಅವಘಡ: ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿರುವ ಮರ ಗಿಡಗಳು

ಬೆಂಗಳೂರು ಗ್ರಾಮಾಂತರ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ರಸ್ತೆ ಬದಿಯ ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಮದ ಆಕಾಶವಾಣಿ‌ ಕೇಂದ್ರದ ಬಳಿ ನಡೆದಿದೆ. ರಸ್ತೆ ಬದಿಯಲ್ಲಿ ಕಿಡಿಗೇಡಿಗಳ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಮರ ಗಿಡಗಳು ಸುಟ್ಟು ಕರಕಲಾಗಿವೆ. ಹಲವು ಮರಗಳು ಬೆಂಕಿಗಾಗುತಿಯಾಗುತ್ತಿದ್ದರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ರಸ್ತೆಯಲ್ಲಿ ಆವರಿಸಿದ ದಟ್ಟ ಹೊಗೆಯಿಂದ ವಾಹನ ಸವಾರರು ಪರದಾಡಿದ್ದಾರೆ.

ಇದನ್ನೂ ಓದಿ: ಲಕ್ಷಾಂತರ ರೂ. ಮೌಲ್ಯದ ಸೀಬೆ ತೋಟ ನಾಶ ಮಾಡಿದ ಬಿಡಿಎ ಅಧಿಕಾರಿಗಳು: ನೋಟಿಸ್ ಬಂದಿಲ್ಲ, ಬಿಡಿಗಾಸು ಕೊಟ್ಟಿಲ್ಲ, ರೈತರು ಆರೋಪ

ಜಮೀನು ವಿವಾದ ಹಿನ್ನೆಲೆ ಮನೆಗೆ ಬೆಂಕಿ ಹಚ್ವಿದ ದುಷ್ಕರ್ಮಿಗಳು

ತುಮಕೂರು: ಜಮೀನು ವಿವಾದ ಹಿನ್ನೆಲೆ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ವಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ದವಡಬೆಟ್ಟ ತಾಂಡದಲ್ಲಿ ನಡೆದಿದೆ. ಕುಮಾರ ನಾಯ್ಕ ಎನ್ನುವವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು,
ಮನೆ ಭಾಗಶಃ ಭಸ್ಮವಾಗಿದೆ. ಪ್ರಿಡ್ಜ್, ಟಿವಿ, ಸೌಂಡ್ ಸಿಸ್ಟಮ್, ಮಂಚ ಸೇರಿದಂತೆ ಸುಮಾರು 5 ಲಕ್ಷ ರೂ. ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಜಮೀನಿನ ದಾಖಲೆ ಸೇರಿದಂತೆ ಹಲವು ಡಾಕ್ಯುಮೆಂಟ್​ಗಳು ಕೂಡ ಬೆಂಕಿಗಾಹುತಿಯಾಗಿವೆ. ಬೆಂಕಿ ಹಚ್ವುವ ಮುನ್ನ ಮನೆಯಲ್ಲಿದ್ದ 40 ಗ್ರಾಂ ಚಿನ್ನ, 3 ಲಕ್ಷ‌ ರೂ. ನಗದನ್ನು ದುಷ್ಕರ್ಮಿಗಳು ದೋಚಿದ್ದಾರೆ.

ಕುಮಾರ್ ನಾಯ್ಕ್ ಕುಟುಂಬದವರು ಬೆಂಗಳೂರಿಗೆ ಹೋದಾಗ ಹೊಂಚು ಹಾಕಿ ಕೃತ್ಯವೆಸಗಲಾಗಿದೆ. ಕಸ್ನನಾಯ್ಕ ಮತ್ತು ಕುಮಾರ್ ನಾಯ್ಕ ನಡುವೆ ಜಮೀನು ವಿವಾದ ಇತ್ತು. ಕಸ್ನನಾಯ್ಕ ಸ್ನೇಹಿತ ಶಿವರಾಜ್ ನಾಯ್ಕ, ಚೇತನಕುಮಾರ್ ನಾಯ್ಕರಿಂದ ಕೃತ್ಯವೆಸಗಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Doddaballapura: ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು, ಗರ್ಭಗುಡಿ ಸೇರುವ ಮುನ್ನವೇ ಬಯಲಿಗೆ ಬಂತು ಹಾರದ ಅಸಲಿಯತ್ತು

ಹೊಲಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಬಿಳಿ ಜೋಳ ಸುಟ್ಟು ಕರಕಲು  

ಗದಗ: ಕಿಡಿಗೇಡಿಗಳು ಹೊಲಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಬಿಳಿ ಜೋಳ ಸುಟ್ಟು ಕರಕಲಾಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಶಂಕ್ರಪ್ಪ, ಬಸಪ್ಪ, ಈರಪ್ಪ, ರಾಮಣ್ಣ ಕೊತಂಬರಿ ಎಂಬ ಸಹೋದರರಿಗೆ ಸೇರಿದ ಜಮೀನು. ಕಿಡಿಗೇಡಿಗಳಿಂದ ಪಕ್ಕದ ಪಾಳುಬಿದ್ದ ಜಮೀನಿಗೆ ಬೆಂಕಿ ಹಚ್ಚಿದ್ದು, ಅಲ್ಲಿಂದ ಬಿಳಿ ಜೋಳದ ಹೊಲಕ್ಕೆ ಬೆಂಕಿ ತಗುಲಿರೋ ಶಂಕೆ ವ್ಯಕ್ತವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:03 pm, Fri, 24 February 23