ಲಕ್ಷಾಂತರ ರೂ. ಮೌಲ್ಯದ ಸೀಬೆ ತೋಟ ನಾಶ ಮಾಡಿದ ಬಿಡಿಎ ಅಧಿಕಾರಿಗಳು: ನೋಟಿಸ್ ಬಂದಿಲ್ಲ, ಬಿಡಿಗಾಸು ಕೊಟ್ಟಿಲ್ಲ, ರೈತರು ಆರೋಪ
ರೈತರು ಬೆಳೆದಿದ್ದ ಲಕ್ಷಾಂತರ ಮೌಲ್ಯದ ಸೀಬೆ ತೋಟವನ್ನು ಬಿಡಿಎ ಅಧಿಕಾರಿಗಳು ನಾಶ ಮಾಡಿರುವಂತಹ ಘಟನೆ ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀಪುರ ಹಾಗೂ ಸೋಮಶೆಟ್ಟಹಳ್ಳಿಯಲ್ಲಿ ನಡೆದಿದೆ.
ನೆಲಮಂಗಲ: ರೈತರು ಬೆಳೆದಿದ್ದ ಲಕ್ಷಾಂತರ ಮೌಲ್ಯದ ಸೀಬೆ ತೋಟ (Guava plantation) ವನ್ನು ಬಿಡಿಎ ಅಧಿಕಾರಿಗಳು ನಾಶ ಮಾಡಿರುವಂತಹ ಘಟನೆ ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀಪುರ ಹಾಗೂ ಸೋಮಶೆಟ್ಟಹಳ್ಳಿಯಲ್ಲಿ ನಡೆದಿದೆ. ಶಿವರಾಮ್ ಕಾರಂತ ಬಡಾವಣೆಯ ಭೂಮಿ ವಶಕ್ಕೆ ಪಡೆಯಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ. ಯಾವುದೇ ನೋಟಿಸ್ ನೀಡದೆ, ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ಹೇಳಿ ಜೆಸಿಬಿಗಳ ಮೂಲಕ ಸೀಬೆ ಮರಗಳನ್ನು ನಾಶ ಮಾಡಿದ್ದಾರೆ. ಇತ್ತ ತೋಟ ಕಳೆದುಕೊಂಡ ರೈತರು ಅಧಿಕಾರಿಗಳ ನಡೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಮಗೆ ಯಾವುದೇ ನೋಟಿಸ್ ಬಂದಿಲ್ಲ, ಬಿಡಿಗಾಸು ಪರಿಹಾರ ಕೊಟ್ಟಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಪರಿಹಾರ ನೀಡಿ ಭೂಮಿ ವಶ ಪಡಿಸಿಕೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ತೋರಿಸಿ ತೆರವು ಕಾರ್ಯಾಚರಣೆ ಮಾಡುವಂತೆ ಆಗ್ರಹಿಸಿದ ಕೆಲ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರ ಬಿಗಿ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳು ತೆರವು ಕಾರ್ಯಚರಣೆಗೆ ಮುಂದಾಗಿದ್ದಾರೆ.
ಹೊಲಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಬಿಳಿ ಜೋಳ ಸುಟ್ಟು ಕರಕಲು
ಗದಗ: ಕಿಡಿಗೇಡಿಗಳು ಹೊಲಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಬಿಳಿ ಜೋಳ ಸುಟ್ಟು ಕರಕಲಾಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಶಂಕ್ರಪ್ಪ, ಬಸಪ್ಪ, ಈರಪ್ಪ, ರಾಮಣ್ಣ ಕೊತಂಬರಿ ಎಂಬ ಸಹೋದರರಿಗೆ ಸೇರಿದ ಜಮೀನು. ಕಿಡಿಗೇಡಿಗಳಿಂದ ಪಕ್ಕದ ಪಾಳುಬಿದ್ದ ಜಮೀನಿಗೆ ಬೆಂಕಿ ಹಚ್ಚಿದ್ದು, ಅಲ್ಲಿಂದ ಬಿಳಿ ಜೋಳದ ಹೊಲಕ್ಕೆ ಬೆಂಕಿ ತಗುಲಿರೋ ಶಂಕೆ ವ್ಯಕ್ತವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂಓದಿ: ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ
ಆಕಸ್ಮಿಕ ಅಗ್ನಿ ಅವಘಡ-2 ಮೊಬೈಲ್ ಅಂಗಡಿಗಳು ಬೆಂಕಿಗಾಹುತಿ
ದೇವನಹಳ್ಳಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಮೊಬೈಲ್ ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಕಚೇರಿಯಲ್ಲಿನ ಎರಡು ಮೊಬೈಲ್ ಅಂಗಡಿಗಳಿಗೆ ಬೆಂಕಿ ತಗುಲುತ್ತಿದ್ದಂತೆ ಭೀತಿಗೊಂಡ ಜನರು ಅಂಗಡಿಗಳಿಂದ ಹೊರಬಂದಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ಟ್ಯಾಂಕರ್ ಮೂಲಕ ಬೆಂಕಿ ನಂದಿಸಿದ್ದಾರೆ. ಅದಾಗ್ಯೂ, ಅಂಗಡಿಯಲ್ಲಿದ್ದ ಮೊಬೈಲ್ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Fri, 24 February 23