Mike Hesson: ಏನ್ ಹೇಳೋದು, ತೀವ್ರ ನಿರಾಶೆ ಅಷ್ಟೇ..!
Bangladesh vs Pakistan: ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ 8 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 127 ರನ್ಗಳ ವಿಜಯ ದಾಖಲಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ 11 ರನ್ಗಳ ರೋಚಕ ಗೆಲುವು ದಾಖಲಿಸಿ ಬಾಂಗ್ಲಾದೇಶ್ ತಂಡ ಸರಣಿ ವಶಪಡಿಸಿಕೊಂಡಿದೆ.

ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪಾಕಿಸ್ತಾನ್ ತಂಡವು ಇದೀಗ ಬಾಂಗ್ಲಾದೇಶ್ ವಿರುದ್ಧ ಏಕದಿನ ಸರಣಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೊಸ ನಾಯಕ, ಹೊಸ ತಂತ್ರದೊಂದಿಗೆ ಢಾಕಾಗೆ ಕಾಲಿಟ್ಟಿದ್ದ ಪಾಕ್ ಪಡೆಯನ್ನು ಬಾಂಗ್ಲಾ 2-1 ಅಂತರದಿಂದ ಸೋಲಿಸಿದೆ. ಈ ಸೋಲಿನ ಬಗ್ಗೆ ಮಾತನಾಡಿದ ಪಾಕಿಸ್ತಾನ್ ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಸೋಲನ್ನು ವಿಶ್ಲೇಷಿಸಿದ ಮೈಕ್ ಹೆಸ್ಸನ್, ನಾವು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಗಿದ್ದು “ತೀವ್ರ ನಿರಾಶಾದಾಯಕ”. ಬಾಂಗ್ಲಾದೇಶದ ಬೌಲರ್‌ಗಳು, ವಿಶೇಷವಾಗಿ ವೇಗಿ ನಹೀದ್ ರಾಣಾ ಅವರ ದಾಳಿಗೆ ತಮ್ಮ ಬ್ಯಾಟರ್‌ಗಳು ಉತ್ತರ ನೀಡಲು ವಿಫಲರಾದರು ಎಂದು ಅವರು ಒಪ್ಪಿಕೊಂಡಿದ್ದಾರೆ.
ಇನ್ನು ಈ ಸರಣಿಯಿಂದ ಬಾಬರ್ ಆಝಂ ಅವರಂತಹ ಹಿರಿಯ ಆಟಗಾರರನ್ನು ಕೈ ಬಿಟ್ಟು, ನಾಲ್ವರು ಹೊಸ ಆಟಗಾರರನ್ನು ಕಣಕ್ಕಿಳಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮೈಕ್ ಹೆಸ್ಸನ್, ಭವಿಷ್ಯದ ತಂಡವನ್ನು ಕಟ್ಟಲು ಇಂತಹ ಪ್ರಯೋಗಗಳು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಸರಣಿಯ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ವಿರುದ್ಧದ ವಿವಾದಾತ್ಮಕ ಡಿಆರ್‌ಎಸ್ ತೀರ್ಪಿನ ಬಗ್ಗೆ ಹೆಸ್ಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಐಸಿಸಿ (ICC) ಮ್ಯಾಚ್ ರೆಫರಿಯನ್ನು ಭೇಟಿಯಾಗಿ ಅಧಿಕೃತವಾಗಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ಈ ಸರಣಿಯ ಮೂಲಕ ಪಾಕ್ ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದ ಶಾಹೀನ್ ಅಫ್ರಿದಿ ಅವರ ನಾಯಕತ್ವವನ್ನು ಬೆಂಬಲಿಸಿರುವ ಮೈಕ್ ಹೆಸ್ಸನ್, ಶಾಹೀನ್ ಒಬ್ಬ “ಚಾಣಾಕ್ಷ ನಾಯಕ” ಮತ್ತು ತಂಡದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತಿದ್ದಾರೆ. ಇದು ಸೋಲಿನ ನಡುವೆ ಸಿಕ್ಕ ಸಕರಾತ್ಮಕ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ SRH ತಂಡಕ್ಕೆ ಆಘಾತ
ಒಟ್ಟಿನಲ್ಲಿ ಟಿ20 ವಿಶ್ವಕಪ್ ಸೋಲಿನ ನೋವನ್ನು ಮರೆಯಲು ಬಾಂಗ್ಲಾದೇಶ್ ತಂಡಕ್ಕೆ ತೆರಳಿದ್ದ ಪಾಕಿಸ್ತಾನ್ ತಂಡವು ಹೀನಾಯ ಸೋಲನುಭವಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಅಲ್ಲದೆ ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ತಂಡದ ಕೋಚ್ ಮೈಕ್ ಹೆಸ್ಸನ್ ಅವರ ಕಾರ್ಯತಂತ್ರದ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆಗಳನ್ನೆತ್ತಿದ್ದು, ಹೀಗಾಗಿ ಅವರು ಕೋಚ್ ಆಗಿ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Published On - 8:06 am, Tue, 17 March 26
