
ಹಾವೇರಿ, (ಅಕ್ಟೋಬರ್ 24): ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಬಾಲಕಿ ಪರಿಚಯಿಸಿಕೊಂಡಿದ್ದ ಓರ್ವ ಯುವಕ, ತನ್ನಿಬ್ಬರು ಗೆಳೆಯರ ಜೊತೆ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ. ಉದಯ್ ಕರಿಯಣ್ಣನವರ, ಕಿಶನ್ ವಡ್ಡರ್, ಆಕಾಶ್ ಮಂತಗಿ, ಚಂದ್ರು ಗೊಲ್ಲರ ಎಂಬುವರು ಸೇರಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಬಾಲಕಿ ಗರ್ಭಾವತಿಯಾಗಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿ ಉದಯ್ ಇದೇ ಮಾರ್ಚ್ ನಲ್ಲಿ ಇನ್ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕೆ ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಉದಯ್ ಗೆಳೆಯರಾದ ಕಿಶನ್ ವಡ್ಡರ್, ಆಕಾಶ್ ಮಂತಗಿ, ಚಂದ್ರು ಗೊಲ್ಲರ ಸೇರಿಕೊಂಡು ಏಪ್ರಿಲ್ ತಿಂಗಳಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈಗ ಬಾಲಕಿ ಗರ್ಭಿಣಿಯಾಗುತ್ತಿದ್ದಂತೆಯೇ ಈ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಮೊದಲು ಉದಯ್ ಎನ್ನುವಾತ ಬಾಲಕಿಯೊಂದಿಗೆ ಪರಿಚಿತನಾಗಿ ಬಳಿಕ ಆಕೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಉದಯ್ ತನ್ನ ಸ್ನೇಹಿತರಿಗೂ ಪರಿಚಿಸಿದ್ದು, ನಂತರ ಎಲ್ಲರೂ ಸೇರಿಕೊಂಡು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ.
ಹೆಣ್ಣು ಮಕ್ಕಳ ರಕ್ಷಣೆಯ ನಿಟ್ಟಿನಲ್ಲಿ ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣ ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ , ಹಾವೇರಿ ಟಿವಿ9
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Fri, 24 October 25