ಬಸವರಾಜ ಬೊಮ್ಮಾಯಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ: ಮುನಿಶ್ರೀ 108 ಪುಣ್ಯಸಾಗರ
ಜನರು ಬೊಮ್ಮಾಯಿಗೆ ಆಶೀರ್ವಾದ ಮಾಡುತ್ತಾರೆ. ಅವರು ಮತ್ತೆ ಸಿಎಂ ಆಗುತ್ತಾರೆ ಎಂದು ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು ಹೇಳಿದರು.
ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಇವರಂತಹ ಸಿಎಂ ಅನ್ನು ರಾಜ್ಯದಲ್ಲಿ ನೋಡಿರಲಿಲ್ಲ. ಜನರು ಬೊಮ್ಮಾಯಿಗೆ ಆಶೀರ್ವಾದ ಮಾಡುತ್ತಾರೆ. ಅವರು ಮತ್ತೆ ಸಿಎಂ ಆಗುತ್ತಾರೆ ಎಂದು ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು (Munishree 108 Punyasagar) ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದ ಜೈನಮಂದಿರ ಪ್ರತಿಷ್ಠಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಬಸವರಾಜ ಬೋಮ್ಮಾಯಿ ಮಹಾವೀರ ಭಗವಾನರ ಭಕ್ತರು. ಅದಕ್ಕಾಗಿ ಇಂದು ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಈ ಹಿಂದೆ ಕೆಜೆಪಿ ಬಿಜೆಪಿ ಆದಾಗ ಏನು ಮಾಡಲಿ ಅಂತಾ ನನ್ನ ಬಳಿ ಬಂದು ಕೇಳಿದ್ದರು. ಈಗ ಇದಿಯಾ ಹಂಗೆ ಇದ್ದಬಿಡು ಬೆರೆ ಕಡೆ ಹೋಗಬೇಡ ಅಂದಿದ್ದೆ. ಅವರು ಬಿಜೆಪಿಯಲ್ಲೆ ಮುಂದುವರೆದಿದ್ದಕ್ಕೆ ಇಂದು ರಾಜ್ಯದ ಸಿಎಂ ಆಗಿದ್ದಾರೆ ಎಂದು ಹೇಳಿದರು.
ನಮ್ಮ ಸಮಾಜಕ್ಕೆ ಯಾತ್ರಿ ನಿವಾಸಕ್ಕಾಗಿ ನಾವು ಯಾವತ್ತೂ ಮನವಿ ಮಾಡಿರಲಿಲ್ಲ. ಆದರೆ ನಮ್ಮ ಸಮಾಜದ ಮೇಲಿನ ಅಭಿಮಾನದಿಂದ ಯಾತ್ರಿ ನಿವಾಸ ಮಂಜೂರು ಮಾಡಿದರು. ಜೈನ ಧರ್ಮವನ್ನು ಆಚರಣೆ ಮಾಡುವ ಪ್ರತಿಯೊಬ್ಬರು ಜೈನ ಧರ್ಮಿಯರು. ಜೈನ ಧರ್ಮದಲ್ಲಿ ಹುಟ್ಟಿದವರು ಮಾತ್ರ ಜೈನ ಧರ್ಮದವರಲ್ಲ ಎಂದರು.
ಇದನ್ನೂ ಓದಿ: LPG ದರ ಏರಿಕೆ; ಕಟೀಲ್ ಭಾಷಣದ ವೇಳೆ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತೆ
ಜೈನ ಧರ್ಮ ಆಚರಣೆ ಮಾಡುವುದು ಬಹಳ ಕಷ್ಟ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ತ್ಯಾಗದ ಆಧಾರದ ಮೇಲೆ ಹುಟ್ಟಿರುವ ಧರ್ಮವೇ ಜೈನ ಧರ್ಮ. ಇದನ್ನು ಆಚರಣೆ ಮಾಡುವುದು ಬಹಳ ಕಷ್ಟ. ಬಸವಣ್ಣ ಹೇಳಿದಂತೆ ಸಕಲ ಜೀವರಾಶಿಗೆ ಒಳಿತು ಬಯಸುವುದು ಜೈನ ಧರ್ಮ. ಯಾವುದೇ ಕಾಯಕ ಮಾಡಿದರೂ ಧರ್ಮ ನಿಷ್ಠೆಯಿಂದ ಮಾಡುತ್ತಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಜೈನ ಧರ್ಮ ಪಸರಿಸಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಬಸದಿಗಳನ್ನು ಅಭಿವೃದ್ಧಿ ಮಾಡಿದ್ದೇನೆ. ಜೈನ ಸಮಾಜಕ್ಕಾಗಿ ಮಾಡಿದ ಕೆಲಸಗಳು ನನಗೆ ಬಹಳ ಇಷ್ಟವಾಗಿದೆ ಎಂದರು.
ಇದನ್ನೂ ಓದಿ: B Sriramulu: ಗಣಿಧಣಿ ಜನಾರ್ದನ ರೆಡ್ಡಿ ಕೈಜಾರಿದ ಮೀನು ಯಾರು? ಲೇಟೆಸ್ಟ್ ಆಗಿ ರೆಡ್ಡಿ ಹೇಳಿದ ಆ ಮೀನಿನ ಕತೆಯೇನು?
ಪ್ರತ್ಯೇಕ ನಿಗಮ ಸ್ಥಾಪನೆಗೆ ಮನವಿ
ಜೈನ ತೀರ್ಥಂಕರರು ಇಡೀ ವಿಶ್ವಕ್ಕೆ ಆಧ್ಯಾತ್ಮದ ಸಾಧನೆ ಸಮರ್ಪಿಸಿದರು. ಪರಮಪೂಜ್ಯರು ನುಡಿಯುವ ಪ್ರತಿಯೊಂದು ಮಾತು ಸತ್ಯ ಆಗುತ್ತದೆ. ಪೂಜ್ಯರು ಸದಾಕಾಲ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಮಹಾವೀರರು ಚಿಕ್ಕವಯಸ್ಸಿನಲ್ಲೇ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಜೈನ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಬೊಮ್ಮಾಯಿಗೆ ಜೈನ ಸಮುದಾಯದ ಮುಖಂಡರಿಂದ ಮನವಿ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 pm, Sun, 12 March 23