ಬೊಮ್ಮಾಯಿಗೆ ಮುಂದಿನ 5 ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ: ಪರೋಕ್ಷವಾಗಿ ಮುಂದಿನ ಸಿಎಂ ಸುಳಿವು ನೀಡಿದ ನಡ್ಡಾ
ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಸುದೀಪ್, ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ್ ನಿರಾಣಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದಾರೆ.
ಹಾವೇರಿ: ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ರೋಡ್ ಶೋನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಸುದೀಪ್, ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ್ ನಿರಾಣಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದಾರೆ. ರೋಡ್ ಶೋ ಬಳಿಕ ಶಿಗ್ಗಾಂವಿ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಷಣದ ವೇಳೆ ಸಿಎಂ ಬೊಮ್ಮಾಯಿ ಸಿಎಂ ಅಭ್ಯರ್ಥಿ. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಬೊಮ್ಮಾಯಿ ಮತ್ತೆ ಸಿಎಂ ಆಗುತ್ತಾರೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ಸಮಾವೇಶದಲ್ಲಿ ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಕೇವಲ ಶಾಸಕ ಸ್ಥಾನಕ್ಕಾಗಿ ಅಲ್ಲ. ಈ ರಾಜ್ಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯುವ ಕಾರ್ಯ ಆಗಲಿದೆ. ಬೊಮ್ಮಾಯಿಗೆ ಮತ್ತೆ ಐದು ವರ್ಷಗಳ ಕಾಲ ಅವಕಾಶ ಸಿಗಲಿದೆ. ಕಾಂಗ್ರೆಸ್ ಅಂದ್ರೆ ಕಮಿಷನ್, ಕಾಂಗ್ರೆಸ್ ಪಕ್ಷ ಅಂದ್ರೆ ಭ್ರಷ್ಟಾಚಾರ. ರೈಲುಗಳ ಸಂಚಾರ ಹೆಚ್ಚಳ ಆಗಬೇಕಾದರೆ ಬಿಜೆಪಿಗೆ ಮತ ಕೊಡಿ. ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಅನುಕೂಲವಾಗಿದೆ. ಬೊಮ್ಮಾಯಿರಿಂದ ರಾಜ್ಯದಲ್ಲಿ ಅಪರಾಧ ಪ್ರಕರಣ ಕಡಿಮೆ ಆಗಿದೆ. ಕರ್ನಾಟಕದಲ್ಲಿರುವ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ ಎನ್ನುವ ಮೂಲಕ ಮುಂದಿನ ಸಿಎಂ ಅಭ್ಯರ್ಥಿ ಸಿಎಂ ಬೊಮ್ಮಾಯಿ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ನನ್ನ ಸಾವು ಆದರೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು
ಇನ್ನು ಭಾಷಣದ ವೇಳೆ ಸಿಎಂ ಬೊಮ್ಮಾಯಿ ಶಿಗ್ಗಾಂವಿ ಜನರಿಗೆ ಧನ್ಯವಾದ ತಿಳಿಸಿದರು. ಸತತ 15 ವರ್ಷ ನೀವು ನನಗೆ ಆಶೀರ್ವಾದ ಮಾಡಿದ್ದೀರಿ. ನಮ್ಮ ನಿಮ್ಮ ನಡುವೆ ಬೇರೆ ಯಾವುದೇ ಶಕ್ತಿ ಬರಲು ಸಾಧ್ಯವಿಲ್ಲ. ಶಿಗ್ಗಾಂವಿ ಕ್ಷೇತ್ರದ ಜನರ ಪ್ರೀತಿಗೆ ನಾನು ಸೋತಿದ್ದೇನೆ. ನಿಮ್ಮ ಪ್ರೀತಿಗೆ ನಾನು ತಲೆಬಾಗಿದ್ದೇನೆ. ನಿಮ್ಮ ವಿಶ್ವಾಸಕ್ಕೆ ನನ್ನ ಜೀವನದ ಉಸಿರಿರುವರೆಗೂ ಸೇವೆಯನ್ನ ಮಾಡುತ್ತೇನೆ ಅನ್ನೋ ಪ್ರತಿಜ್ಞೆ ಮಾಡುತ್ತೇನೆ. ಶಿಗ್ಗಾಂವಿ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇನೆ. ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇನೆ. ನಾನು ಸಿಎಂ ಆಗಿ ವಿದ್ಯಾರ್ಥಿಗಳು, ರೈತರಿಗೆ ಯೋಜನೆ ಜಾರಿ ಮಾಡಿದ್ದೇನೆ. 15 ವರ್ಷದಲ್ಲಿ 10 ಸಾವಿರ ಮನೆ ಕಟ್ಟಿದ್ದೇನೆ. ಮಳೆ ಬಂದಾಗ 12 ಸಾವಿರ ಮನೆ ಕಟ್ಟಿದ್ದೇನೆ. ರಾಜ್ಯದಲ್ಲಿ 125ಕ್ಕಿಂತ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರ್ತೇವೆ. ಸಿಎಂ ಕ್ಷೇತ್ರ ಬದಲಾವಣೆ ಮಾಡ್ತಾರೆ ಅಂತಾ ಊಹಾಪೋಹ ಇತ್ತು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡ್ತೇನೆ. ನನ್ನ ಸಾವು ಆದರೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು. ನಾನು ನಿಮ್ಮ ಋಣ ತೀರಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಜನರನ್ನು ಬಡಿದೆಬ್ಬಿಸುವಂತೆ ಭಾಷಣ ಮಾಡಿದರು.
ಈ ಕಿಚ್ಚ ಅವರನ್ನ ಗೆಲ್ಲಿಸಿ ಹೋಗುತ್ತಾನೆ
ಇನ್ನು ಇದೇ ವೇಳೆ ನಟ ಕಿಚ್ಚ ಸುದೀಪ್ ಕೂಡ ಭಾಷಣ ಮಾಡಿದ್ರು. ಸುದೀಪ್ ಭಾಷಣಕ್ಕೆ ಬಂದ ತಕ್ಷಣ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಸಂತ ಶಿಶುನಾಳ ಷರೀಫ್ ನಾಡಿದು. ಶಿಗ್ಗಾಂವಿಯಲ್ಲಿ ಪ್ರಚಾರ ಆರಂಭಿಸಿದ್ದಕ್ಕೆ ಬಹಳ ಖುಷಿಯಾಗಿದೆ. ನಾನು ಸುಮ್ ಸುಮ್ನೆ ಪ್ರಚಾರಕ್ಕೆ ಬರುವುದಿಲ್ಲ. ನಾನು ಕೆಲಸ ಮಾಡೋರಿಗೆ ಮಾತ್ರ ಬರೋದು. ನಾನು ಇಲ್ಲಿ ಬಂದಿದ್ದೀನಿ, ಈ ಕಿಚ್ಚ ಅವರನ್ನ ಗೆಲ್ಲಿಸಿ ಹೋಗುತ್ತಾನೆ. ಕಡಿಮೆ ಅವಧಿಯಲ್ಲಿ ಸಿಎಂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಭಾರತೀಯನಾಗಿ ಪ್ರಧಾನಿ ಮೋದಿ ಕೆಲಸವನ್ನು ಮೆಚ್ಚುತ್ತೇನೆ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ ಎಂದು ಸುದೀಪಿ ಸಿಎಂ ಬೊಮ್ಮಾಯಿಯನ್ನು ಹಾಡಿ ಹೊಗಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ