ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು: ತವರು ಕ್ಷೇತ್ರದ ಜನರೆದುರು ಸಿಎಂ ಕಣ್ಣೀರು
ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ನಡೆದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಷಣ ನಡುವೆ ಕ್ಷೇತ್ರದ ಜನರ ಎದುರು ಭಾವುಕ ನುಡಿಗಳನ್ನಾಡಿದ್ದಾರೆ.
ಹಾವೇರಿ: ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವೇದಿಕೆ ಮೇಲೆಯೇ ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು. ಇಂದು(ಡಿಸೆಂಬರ್ 17) ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ನಡೆದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಭಾಷಣ ನಡುವೆ ಕ್ಷೇತ್ರದ ಜನರ ಎದುರು ಭಾವುಕ ನುಡಿಗಳನ್ನಾಡಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಇದು ಕನಕದಾಸರ ಪುಣ್ಯಭೂಮಿ. ಅವರ ಮಹಿಮೆ ಇಲ್ಲಿಂದಲೇ ಪ್ರಾರಂಭವಾಗಿದೆ. ಇದು ಪರಿವರ್ತನೆಯ ಭೂಮಿ. ಈ ಕಾರ್ಯಕ್ರಮ ಮಾಡುವುದರಿಂದ ಕ್ಷೇತ್ರದ ಮುಂದಿನ ಭವ್ಯ ಭವಿಷ್ಯ ಮತ್ತಷ್ಟು ಪ್ರಗತಿಯಾಗಲಿಗಲಿದೆ. ಬಡ ಜನರ, ರೈತರ ಕಲ್ಯಾಣಕ್ಕಾಗಿ ಯೋಜನೆ ಮುಟ್ಟಿಸಿದಾಗ ಸುಭಿಕ್ಷ ಕ್ಷೇತ್ರ ಆಗಲಿದೆ. ಮಾಡಿಯೇ ತೀರುತ್ತೇನೆ ಎಂದು ಪಣ ತೊಡುತ್ತೇನೆ ಎಂದರು.
ನಿಮ್ಮೆಲ್ಲರ ಪ್ರೀತಿ., ಆಶೀರ್ವಾದದಿಂದ ನಾಡಿನ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ರಾಜ್ಯದ ನಾನಾ ಕಡೆ ಹೋದಾಗ ಸಿಗುವ ಸ್ವಾಗತ ನೋಡಿದಾಗ ನೀವು ನೆನಪಾಗುತ್ತೀರಿ. ಈ ಸ್ಥಾನ ಗೌರವ ನನಗೆ ಸಿಗಬೇಕಾದ್ದಲ್ಲ. ಕ್ಷೇತ್ರದ ಜನರಿಗೆ ಸಿಗಬೇಕಾದ್ದು ಎಂದು ಅನಿಸುತ್ತಿದೆ. ನಿಮ್ಮ ಪ್ರೀತಿ ನೆನಪಾಗುತ್ತದೆ ಎಂದು ಭಾವುಕರಾಗಿ ಹೇಳಿದರು.
ಎಲ್ಲ ಗ್ರಾಮಗಳಿಗ ಅನೇಕ ಸಲ ಹೋಗಿದ್ದೇನೆ. ಕೊಟ್ಟಿರುವ ರೊಟ್ಟಿ, ಬುತ್ತಿ, ಹೋಳಿಗೆ, ಸೀಕರಣಿ ಉಣಿಸಿದ್ದೀರಿ. ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ಅದರ ಮುಂದೆ ಎಷ್ಟು ಕೆಲ ಮಾಡಿದರೂ ಕಡಿಮೆ. ನಿಮ್ಮ ಋಣದಲ್ಲಿದ್ದೇನೆ. ಹಗಲಿರುಳು ಕೆಲಸ ಮಾಡಿ, ರಾಜ್ಯದ ಭಾರ ಇದ್ದರೂ ಹೃದಯ ಸ್ಥಾನದಲ್ಲಿ ನೀವಿದ್ದೀರಿ. ಮುಂದೆ ಕೂಡ ಮಾಡುತ್ತೇನೆ ಎಂದು ಕ್ಷೇತ್ರದ ಜನರೆದುರು ಮನದಾಳದ ಮಾತನಾಡಿದರು.
Published On - 11:40 pm, Sat, 17 December 22