ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ: ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ, ಬಜೆಟ್​ ಬಗ್ಗೆ ಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2022 | 1:48 PM

ಕರ್ನಾಟಕದಲ್ಲಿ ಇಡಿಯಾಗಿ ಕನ್ನಡಪ್ರೀತಿ ಇರಬೇಕು. ಕರ್ನಾಟಕದ ಒಳನಾಡು ಇರಲಿ ಅಥವಾ ಗಡಿ ಭಾಗವೇ ಇರಲಿ, ಎಲ್ಲೆಡೆ ಕನ್ನಡದ ಕಂಪು ಹರಿಸಬೇಕು ಎಂದರು.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ: ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ, ಬಜೆಟ್​ ಬಗ್ಗೆ ಮಾತು
ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರಾಠ ಭವನಕ್ಕೆ ಶಂಕುಸ್ಥಾಪನೆ ನರವೇರಿಸಿದರು.
Image Credit source: Tv9Kannada
Follow us on

ಹಾವೇರಿ: ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಚುರುಕಾಗಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ (Mahesh Joshi) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಮರಾಠ ಭವನದ ಶಂಕುಸ್ಥಾಪನೆಯನ್ನೂ ಮುಖ್ಯಮಂತ್ರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ಸುಂದರವಾಗಿರುವ ಸಮುದಾಯ ಭವನ ಇಲ್ಲಿ ನಿರ್ಮಾಣವಾಗಲಿದೆ. ಸಮಾಜದ ಎಲ್ಲ ಮುಖಂಡರಿಗೂ ಶುಭಾಶಯ ಹೇಳುವೆ. ನಾವು ನಿಮ್ಮ ಜೊತೆ ಅಣ್ಣತಮ್ಮಂದಿರ ಥರ ಇರುತ್ತೇವೆ. ಪರಸ್ಪರ ಸಹಾಯ, ಸಹಕಾರದಿಂದ ಇದ್ದಾಗ ಮಾತ್ರ ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಸಮಾಜ ಅಂದರೆ ಇದು ಒಂದು ಜಾತಿಗೆ ಸೀಮಿತ ಅಲ್ಲ. ವಿವಿಧ ಸಮುದಾಯಗಳು ಸೇರಿ ಒಂದು ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಇಡಿಯಾಗಿ ಕನ್ನಡಪ್ರೀತಿ ಇರಬೇಕು. ಕರ್ನಾಟಕದ ಒಳನಾಡು ಇರಲಿ ಅಥವಾ ಗಡಿ ಭಾಗವೇ ಇರಲಿ, ಎಲ್ಲೆಡೆ ಕನ್ನಡದ ಕಂಪು ಹರಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನವು ಇತರೆಲ್ಲ ಸಮ್ಮೇಳನಗಳಿಗಿಂತಲೂ ಉತ್ಕೃಷ್ಟವಾಗಿ ನಡೆಯಲಿದೆ. ಕನ್ನಡವು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಹಲವು ಶತಮಾನಗಳ ಇತಿಹಾಸದಲ್ಲಿ ಏನೆಲ್ಲಾ ಬದಲಾವಣೆಗಳು ಕಂಡುಬಂದರೂ ಕನ್ನಡವು ಇಂದಿಗೂ ಗಟ್ಟಿಯಾಗಿಯೇ ನಿಂತಿದೆ ಎಂದು ಹೇಳಿದರು.

ಕನ್ನಡವನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಇದು ಗಂಧದಗುಡಿ, ಚಿನ್ನದ ನಾಡು, ಸಾಹಿತ್ಯದ ಬೀಡು, ಸಾಂಸ್ಕೃತಿಕ ನೆಲೆ, ರಾಜ ಮಹಾರಾಜರ ಗತ ವೈಭವದ ಶ್ರೀಮಂತ ನಾಡು ನಮ್ಮದು. ನಾಡಿನ ಇವತ್ತಿನ ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಆಗಲಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆನೀಡಿದರು.

ಶಿವಾಜಿ ಮಹಾರಾಜರು ಇಡೀ ದೇಶಕ್ಕೆ ಸೇರಿದವರು. ಮರಾಠ ಸಮುದಾಯ ಭವನ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಅವಕಾಶ ಕೊಟ್ಟಿದೆ. ಸಂವಿಧಾನ ರಚಿಸಿದ ಅಂಬೇಡ್ಕರ್ ಅವ​​ರನ್ನು ನಾವು ಸದಾ ನೆನಪಿಡಬೇಕು. ಕೇವಲ ಬಿಲ್ಡಿಂಗ್ ಕಟ್ಟುವುದರಿಂದ ದೇಶ ಕಟ್ಟಿದ ಹಾಗೆ ಆಗುವುದಿಲ್ಲ. ವ್ಯಕ್ತಿಗಳ ಚಾರಿತ್ರ್ಯ, ಸಂಸ್ಕಾರ, ಸಂಸ್ಕೃತಿಗಳಿಂದಲೇ ದೇಶ ರೂಪುಗೊಳ್ಳುತ್ತದೆ. ಕರ್ನಾಟಕದಲ್ಲಿ ಎಲ್ಲ ಭಾಷೆಯವರೂ ಅನ್ಯೋನ್ಯವಾಗಿದ್ದಾರೆ ಎಂದರು.

ದೆಹಲಿಯಲ್ಲಿ ರಾಜಕೀಯ ಚರ್ಚೆ

ದೆಹಲಿಯಲ್ಲಿ ಸೋಮವಾರ ಬಿಜೆಪಿ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಏನೆಲ್ಲಾ ಮಾತುಕತೆಯಾಯಿತು ಎಂಬುದನ್ನು ಚರ್ಚೆಯ ನಂತರ ತಿಳಿಸುತ್ತೇನೆ. ದೆಹಲಿಯ ಭೇಟಿ ವೇಳೆ ಖಂಡಿತವಾಗಿ ರಾಜಕೀಯ ಚರ್ಚೆ ಆಗುತ್ತದೆ. ಚುನಾವಣೆ ತಯಾರಿ ಬಗ್ಗೆಯೂ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು. ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಈಗಾಗಲೇ ವಿವಿಧ ಹಂತಗಳಲ್ಲಿ ಚರ್ಚೆ ನಡೆದಿದೆ ಎಂದರು.

ಕೊರೊನಾ ನಿಯಂತ್ರಣಕ್ಕೆ ಕ್ರಮ

ರಾಜ್ಯದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಟೆಸ್ಟ್​​ಗಳನ್ನು ಹೆಚ್ಚಿಸುತ್ತೇವೆ. ಬೂಸ್ಟರ್ ಡೋಸ್ ಕೂಡಾ ಜಾಸ್ತಿ ಮಾಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು, ತಂತ್ರಜ್ಞಾನಗಳನ್ನು ಅಳವಡಿಸುತ್ತೇವೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡುತ್ತಿದ್ದೇವೆ. ಏರ್​ಪೋರ್ಟ್ ಹಾಗೂ ಬಸ್​ಸ್ಟಾಪ್​ಗಳಲ್ಲಿ ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದರು.

86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೋನಾ ಭೀತಿ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮೇಳನವು ಹೊರಾಂಗಣದಲ್ಲಿ ನಡೆಯಲಿದೆ. ಮಾಸ್ಕ್, ಸ್ಯಾನಿಟೈಸರ್, ಅಂತರ ಕಾಪಾಡಲು ಮಾರ್ಗಸೂಚಿಗಳನ್ನು ಪಾಲನೆ‌ ಮಾಡಲಾಗುತ್ತದೆ ಎಂದರು. ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಏರ್​ಪೋರ್ಟ್​​, ಬಸ್​ ನಿಲ್ದಾಣಗಳಲ್ಲಿ ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಫೆಬ್ರುವರಿಯಲ್ಲಿ ರಾಜ್ಯ ಬಜೆಟ್

ಕರ್ನಾಟಕದ ಬಜೆಟ್ ಮುಂದಿನ ಫೆಬ್ರುವರಿಯಲ್ಲಿ ಮಂಡನೆಯಾಗಲಿದೆ. ಈ ಸಂಬಂಧ ಹಣಕಾಸು ಇಲಾಖೆಯ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೂ ಚರ್ಚೆ ಮಾಡಲಿದ್ದೇನೆ. ಜನವರಿ ತಿಂಗಳಿನಿಂದಲೇ ಬಜೆಟ್​​ ಸಿದ್ಧತೆ ಶುರು ಮಾಡಲಿದ್ದೇನೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Sat, 24 December 22