ಕಾಂಗ್ರೆಸ್ ಅಭ್ಯರ್ಥಿಯ ಕೆಲಸವೇ ಅವರನ್ನು ಕಾಪಾಡಿದೆ: ಹಾನಗಲ್ ಹಿನ್ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2021 | 3:21 PM

ಹಾನಗಲ್ ಕ್ಷೇತ್ರವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿದೆ. ಅಲ್ಲಿ ಬಿಜೆಪಿಯ ಪ್ರಚಾರವನ್ನು ಸ್ವತಃ ಮುಖ್ಯಮಂತ್ರಿಯೇ ಮುನ್ನಡೆಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಯ ಕೆಲಸವೇ ಅವರನ್ನು ಕಾಪಾಡಿದೆ: ಹಾನಗಲ್ ಹಿನ್ನಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಮಂಡ್ಯ: ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಿಚ್ಚಳವಾಗಿದ್ದು, ಸಿಂದಗಿಯಲ್ಲಿ ಬಿಜೆಪಿ ಮತ್ತು ಹಾನಗಲ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯದ ಸನಿಹದಲ್ಲಿದ್ದಾರೆ. ಹಾನಗಲ್ ಕ್ಷೇತ್ರವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಚಾರವನ್ನು ಸ್ವತಃ ಮುಖ್ಯಮಂತ್ರಿಯೇ ಮುನ್ನಡೆಸಿದ್ದರು.

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾನಗಲ್​ನಲ್ಲಿ ನಿರೀಕ್ಷಿಸಿದಷ್ಟು ಮತಗಳು ಬಂದಿಲ್ಲ. ಹೀಗಾಗಿಯೇ ನಮಗೆ ಹಿನ್ನಡೆ ಆಗಿದೆ. ಸಿ.ಎಂ.ಉದಾಸಿಗೆ ಸಲ್ಲಬೇಕಿದ್ದ ಮತ ಪಡೆಯಲು ಆಗಿಲ್ಲ. ನಮ್ಮ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದರು. ಉಪ ಚುನಾವಣೆಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ ಎಂದು ಹೇಳಿದರು. ಕಾಂಗ್ರೆಸ್​ ಅಭ್ಯರ್ಥಿ ಕ್ಷೇತ್ರದಲ್ಲಿ 2-3 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಅವರ ಕೈಹಿಡಿದಿದ್ದಾರೆ ಎಂದು ವಿಶ್ಲೇಷಿಸಿದರು.

ಉಪಚುನಾವಣೆ ನಡೆದಿದ್ದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಉಪ ಚುನಾವಣೆ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಮುಂದೆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ನುಡಿದರು.

ಸಿಂದಗಿ ಫಲಿತಾಂಶದಲ್ಲಿ ಹಣದ ಅಬ್ಬರ ಕೆಲಸ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸೋತವರ ಸ್ಟ್ಯಾಂಡರ್ಡ್ ಫಾರ್ಮೆಟ್ ಹೇಳಿಕೆಯಿದು. ಇದು ಹಣ ಮತ್ತು ತೋಳ್ಬಲದಿಂದ ಸಿಕ್ಕ ಗೆಲುವು ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಜನ ಬೆಂಬಲ ಇಲ್ಲದೆ ಯಾವುದೇ ಚುನಾವಣೆ ಗೆಲ್ಲೋಕೆ ಆಗುವುದಿಲ್ಲ. ಚುನಾವಣೆಯಲ್ಲಿ ಬೆಂಬಲ ಕೇಳಿದ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?
ಇದನ್ನೂ ಓದಿ: Hangal By Election Winner: ಹಾನಗಲ್​ನಲ್ಲಿ ಬಿಜೆಪಿಗೆ ಹೀನಾಯ ಸೋಲು; ಕಾಂಗ್ರೆಸ್​​ನ ಶ್ರೀನಿವಾಸ ಮಾನೆಗೆ ಮಣೆ ಹಾಕಿದ ಮತದಾರ

Published On - 3:20 pm, Tue, 2 November 21