ಸಾಮಾನ್ಯವಾಗಿ ಮನುಷ್ಯ ಪುಣ್ಯತಿಥಿಯನ್ನ ಮಾಡೋದನ್ನ ನಾವು ನೀವು ನೋಡಿದ್ದೇವೆ. ಅದರೆ ಈ ಗ್ರಾಮದಲ್ಲಿ ಹೋರಿಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ‘ಶರವೇಗದ ಓಟಗಾರ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ’ ಪುಣ್ಯ ಕಾರ್ಯ (chamundi express hori ceremony) ಮಾಡಿದ್ದಾರೆ. ಇಡೀ ಊರಿನ ಜನರು ವಂತಿಗೆ ನೀಡಿ ಮನುಷ್ಯರಂತೆ ಕೊಬ್ಬರಿ ಹೋರಿಯ (Bull) ಪುಣ್ಯತಿಥಿ ಕಾರ್ಯವನ್ನ ಮಾಡಿದ್ದಾರೆ. ಹಾಗಾದರೆ ಆ ಗ್ರಾಮ ಯಾವುದು ಅಂತಿರಾ.. ಈ ಸ್ಟೋರಿ ನೋಡಿ…
ಹೋರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸ್ತಿರೋ ಗ್ರಾಮಸ್ಥರು. ಗ್ರಾಮದಲ್ಲಿ ಅಲ್ಲಲ್ಲಿ ಕಾಣೋ ಹೋರಿಯ ಭಾವಚಿತ್ರ. ಹೌದು ಇದು ಹಾವೇರಿ (Haveri) ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ಕಂಡುಬಂದ ದೃಶ್ಯಗಳು. ರಾಜ್ಯಮಟ್ಟದ ಹೋರಿ ಹಬ್ಬದಲ್ಲಿ ಸಾಕಷ್ಟು ಹೆಸರು ಮಾಡಿದ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ ಪುಣ್ಯತಿಥಿಯನ್ನ ಗ್ರಾಮಸ್ಥರೆಲ್ಲ ಸೇರಿ ನೇರವೇರಿಸಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಗ್ರಾಮದ ರೈತ ಮೆಹಬೂಬ್ ಸಾಬ್ ದೇವಗಿರಿ ಎಂಬುವರ ಮನೆಯಲ್ಲಿ ಈ ಹೋರಿ ಜನಿಸಿತ್ತು. ಜಮೀನು ಕೆಲಸದ ಜೊತೆಗೆ, ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಶರವೇಗದಲ್ಲಿ ಓಡುವ ಮೂಲಕ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಹೆಸರು ಮಾಡಿತ್ತು. ಅದರೆ ಈ ಹೋರಿಯನ್ನ ಮೂರು ವರ್ಷಗಳ ಹಿಂದೆ ಶಿಕಾರಿಪುರದವರಿಗೆ 18 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು.
ನಂತರ, ಶಿಕಾರಿಪುರ ಮಾಲೀಕರು ಮಾಸೂರಿಗೇ ಚಾಮುಂಡಿ ಎಕ್ಸ್‌ಪ್ರೆಸ್ ಅನ್ನು ಮತ್ತೆ ಮಾರಾಟ ಮಾಡಿದರು. ಅದರೆ ಚಾಮುಂಡಿ ಎಕ್ಸ್‌ಪ್ರೆಸ್ ಹೆಸರು ಬದಲಿಸಿ ಮೂಕಾಂಬಿಕಾ ಎಕ್ಸ್‌ಪ್ರೆಸ್ ಅಂತಾ ನಾಮಕರಣ ಮಾಡಿದರು. ಒಂಬತ್ತು ದಿನಗಳ ಹಿಂದೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ನಿಧನವಾಗಿದ್ದು, ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಹುಟ್ಟೂರಾದ ಚಿಕ್ಕಲಿಂಗದಹಳ್ಳಿಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ನಿನ್ನೆ ಶನಿವಾರ ಅದರ ಪುಣ್ಯತಿಥಿ ಮಾಡಿದರು. ಗ್ರಾಮದ ಪ್ರತಿಯೊಂದು ಮನೆಯವರು ಪುಣ್ಯತಿಥಿಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದರು ಎಂದು ಗ್ರಾಮಸ್ಥ ಹನುಮಂತಪ್ಪ ತಿಳಿಸಿದರು.
ಸಾಮಾನ್ಯವಾಗಿ ಮನುಷ್ಯರು ಮೃತಪಟ್ಟಾಗ ತಿಥಿಕಾರ್ಯ ನೆರವೇರಿಸ್ತಾರೆ. ಆದರೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಮೃತಪಟ್ಟು ಒಂಬತ್ತು ದಿನಗಳಾಗಿದ್ದರಿಂದ ಹೋರಿ ಅಭಿಮಾನಿಗಳು ನೆಚ್ಚಿನ ಹೋರಿಗೆ ತಿಥಿ ಕಾರ್ಯ ನೆರವೇರಿಸಿದ್ರು. ಮೃತ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ ಭಾವಚಿತ್ರ ಮಾಡಿಸಿ, ಭಾವಚಿತ್ರದ ಮುಂದೆ ತರಹೇವಾರಿ ಹಣ್ಣುಗಳು, ತರಹೆವಾರಿ ಸಿಹಿ ತಿನಿಸುಗಳು ಇಟ್ಟು ಗ್ರಾಮದಲ್ಲಿನ ಸ್ವಾಮಿಯನ್ನು ಕರೆಯಿಸಿ ಅಗಲಿದ ಹೋರಿಯ ತಿಥಿಯ ಪೂಜೆ ನೆರವೇರಿಸಿದ್ರು. ಚಾಮುಂಡಿ ಎಕ್ಸ್‌ಪ್ರೆಸ್ ಬೈಕ್, ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬಹುಮಾನ ಗೆದ್ದಿದೆ. ಇಡಿ ಊರಿಗೆ ಊರಿನ ಜನರು ಹಾಗೂ ಅಭಿಮಾನಿಗಳು ಸೇರಿ ವಂತಿಗೆ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ಎನ್ನುತ್ತಾರೆ ಹೋರಿಯ ಅಭಿಮಾನಿ ಮಾಲಾ.
ಹೋರಿ ಮೃತಪಟ್ಟು ಒಂಬತ್ತು ದಿನಗಳು ಆಗಿದ್ದರಿಂದ ಹೋರಿಯ ಅಭಿಮಾನಿಗಳು ಹೋರಿಗೆ ಇವತ್ತು ತಿಥಿ ಕಾರ್ಯ ನೆರವೇರಿಸಿದ್ರು. ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಹಬ್ಬದ ಅಖಾಡದಲ್ಲಿ ಚಾಮುಂಡಿ ಎಕ್ಸ್‌ಪ್ರೆಸ್ ದೊಡ್ಡ ಹೆಸರು ಮಾಡಿದ್ದರಿಂದ ಅಭಿಮಾನಿಗಳು ಹೋರಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ಹೋರಿಗೆ ಪೂಜೆ ಸಲ್ಲಿಸಿ, ಗೋಧಿ ಹುಗ್ಗಿಯ ಊಟ ಸವಿದು ಮನೆಯತ್ತ ಹೆಜ್ಜೆ ಹಾಕಿದ್ರು. (ವರದಿ: ರವಿ ಹೂಗಾರ, ಟಿವಿ 9, ಹಾವೇರಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Sun, 11 December 22