
ಹಾವೇರಿ, ಸೆಪ್ಟೆಂಬರ್ 21: ರಾಜಬೀದಿಯಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ, ಗಣೇಶ ವಿಸರ್ಜನಾ ಮೆರವಣಿಗೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಸಿಂಪಿಗೆ ಗಲ್ಲಿಯಲ್ಲಿ ನಡೆದಿದೆ. ಮುಸ್ಲಿಂ ಸಮುದಾಯದವರು ಯಾವುದೇ ರೀತಿ ವಿರೋಧ ಮಾಡದಿದ್ದರೂ ಪೊಲೀಸರೇ ಮೆರವಣಿಗೆಗೆ ಅವಕಾಶ ನೀಡಿಲ್ಲ ಎಂದು ಹಿಂದೂಗಳು ಆರೋಪಿಸಿದ್ದಾರೆ. ಮೈಸೂರಿನ ಟಿ ನರಸೀಪುರದಲ್ಲಿ ಗಣೇಶ ಮೆರವಣಿಗೆ ಸಂಬಂಧ ಇನ್ಸ್ಪೆಕ್ಟರ್ ಧನಂಜಯ ಆಡಿದ್ದ ಮಾತುಗಳು, ನಂತರ ಉದ್ಭವಿಸಿದ್ದ ವಿವಾದದ ಬೆನ್ನಲ್ಲೇ ಹಾವೇರಿಯಲ್ಲಿಯೂ ಪೊಲೀಸರು ಗಣೇಶ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಆರೋಪ ಕೇಳಿಬಂದಿದೆ.
ರಾತ್ರಿ ಗಣೇಶ ದೇವಸ್ಥಾನದಿಂದ ಕಲಾತಂಡಗಳೊಂದಿಗೆ ಸಂಪ್ರದಾಯಿಕವಾಗಿ ಗಣೇಶ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ಸುಮಾರು 500 ಮೀಟರ್ ದೂರ ಸಾಗಿದ ಬಳಿಕ ರಾಜಬೀದಿಯಲ್ಲಿ ಮೆರವಣಿಗೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಈ ವೇಳೆ ಗಣಪತಿ ಉತ್ಸವ ಸಮಿತಿ ಸದಸ್ಯರು ಪೊಲೀಸರ ಮನವೊಲಿಕೆಗೆ ಬಗ್ಗಿಲ್ಲ. ಬಳಿಕ ಮೆರವಣಿಗೆ ಸ್ಥಗಿತಗೊಳಿಸಿ, ಗಣೇಶ ಮೂರ್ತಿಯನ್ನು ವಾಪಸ್ ದೇವಸ್ಥಾನಕ್ಕೆ ತೆಗೆದುಕೊಂಡು ಬಂದು ಮರುಪ್ರತಿಷ್ಠಾಪನೆ ಮಾಡಲಾಗಿದೆ.
ರಾಜಬೀದಿಯಲ್ಲಿ ಮಸೀದಿ ಇರುವ ಕಾರಣ ಗಣೇಶ ಮೂರ್ತಿ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ. ಈ ಕುರಿತು ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಅವರು ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ರಾಜಬೀದಿಯಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಗಣಪತಿ ಉತ್ಸವ ಸಮಿತಿ ಸದಸ್ಯರು ಪಟ್ಟುಹಿಡಿದಿದ್ದಾರೆ. ಕಳೆದ 30 ವರ್ಷಗಳಿಂದ ಜಾತಿ ಭೇದವಿಲ್ಲದೆ ಗಣೇಶ ಹಬ್ಬ ಆಚರಿಸುತ್ತಿದ್ದೇವೆ. ಈಗ ರಾಜಬೀದಿಯಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಮುದಾಯದವರು ಗಣೇಶ ಮೂರ್ತಿ ಮೆರವಣಿಗೆಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಸವಣೂರಿನಲ್ಲಿ ಈ ಹಿಂದೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಗಲಾಟೆ ನಡೆದಿಲ್ಲ. ಆದರೂ ಪೊಲೀಸರು ರಾಜಬೀದಿಯಲ್ಲಿ ಮೆರವಣಿಗೆ ಬೇಡ ಎಂದು ಹೇಳುತ್ತಿದ್ದಾರೆ ಎಂದು ಸವಣೂರು ಪಟ್ಟಣ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಮಹೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಟಿ.ನರಸೀಪುರ ಗಣೇಶ ಗಲಾಟೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್
ಮೆರವಣಿಗೆ ತಡೆದು ಹಿಂದೂ ಕಾರ್ಯಕರ್ತರನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಭೆ ಕರೆದು ಎಲ್ಲರೊಂದಿಗೆ ಚರ್ಚೆ ನಡೆಸಲಾಗುವುದು. ಬಳಿಕ ಎಲ್ಲಾ ಗಣೇಶ ಮೂರ್ತಿಗಳ ಮೆರವಣಿಗೆಯನ್ನು ರಾಜಬೀದಿಯಲ್ಲಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹೇಶ್ ತಿಳಿಸಿದ್ದಾರೆ.
ವರದಿ: ಅಣ್ಣಪ್ಪ ಬರ್ಕಿ, ಟಿವಿ9, ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Mon, 21 September 26