ಹಾವೇರಿಯಲ್ಲಿ ಮೀಟರ್ ಬಡ್ಡಿಕೋರರ ಅಟ್ಟಹಾಸ: ವ್ಯಕ್ತಿಯನ್ನು ಅಪಹರಿಸಿ 4 ದಿನ ಚಿತ್ರಹಿಂಸೆ, ಬಾಯಿಗೆ ಮೂತ್ರ ಸುರಿದು ವಿಕೃತಿ!
ಹಾವೇರಿಯ ಬಂಕಾಪುರದಲ್ಲಿ 70 ಸಾವಿರ ರೂ. ಸಾಲದ ಬಡ್ಡಿ ಪಾವತಿಸಿಲ್ಲವೆಂದು ವ್ಯಕ್ತಿಯೊಬ್ಬನನ್ನು ಅಪಹರಿಸಿ, 4 ದಿನ ಕಾಲು ಕಟ್ಟಿಹಾಕಿ ಸಿಗರೇಟ್‌ನಿಂದ ಸುಟ್ಟು, ಬಾಯಿಗೆ ಮೂತ್ರ ಸುರಿದು ಭೀಕರ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ. ತಪ್ಪಿಸಿಕೊಂಡು ಆಸ್ಪತ್ರೆ ಸೇರಿದ ಸಂತ್ರಸ್ತ ಮಣಿಕಂಠ ನೀಡಿದ ದೂರಿನ ಮೇರೆಗೆ ನಾಲ್ವರು ಮೀಟರ್ ಬಡ್ಡಿಕೋರರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- 70 ಸಾವಿರ ಸಾಲದ ಬಡ್ಡಿಗೆ ವ್ಯಕ್ತಿಯ ಅಪಹರಿಸಿ ಭೀಕರ ಚಿತ್ರಹಿಂಸೆ.
- ಕಾಲು ಕಟ್ಟಿ ಸಿಗರೇಟ್‌ನಿಂದ ಸುಟ್ಟು, ಬಾಯಿಗೆ ಮೂತ್ರ ಸುರಿದು ವಿಕೃತಿ.
- ಬಂಕಾಪುರ ಪೊಲೀಸ್ ಠಾಣೆಯಲ್ಲಿ ನಾಲ್ವರು ಮೀಟರ್ ಬಡ್ಡಿಕೋರರ ವಿರುದ್ಧ ದೂರು.
ಹಾವೇರಿ, ಅಕ್ಟೋಬರ್ 26: ಮೀಟರ್ ಬಡ್ಡಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಅಪಹರಿಸಿ, ನಾಲ್ಕು ದಿನಗಳ ಕಾಲ ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಿ ಬಾಯಿಗೆ ಮೂತ್ರ ಸುರಿದಿರುವ ಶೋಚನೀಯ ಹಾಗೂ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಕೆಲವು ವಾರಗಳ ಬಡ್ಡಿ ಹಣ ತಡವಾಗಿದ್ದಕ್ಕೆ ಹೇಯ ಕೃತ್ಯ!
ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಹಳವಳ್ಳಿ ಎಂಬುವರೇ ಬಡ್ಡಿಕೋರರ ಕ್ರೌರ್ಯಕ್ಕೆ ಸಿಲುಕಿದ ಸಂತ್ರಸ್ತ. ಮಣಿಕಂಠ ಆರೋಪಿಗಳ ಬಳಿ 70 ಸಾವಿರ ರೂಪಾಯಿ ಸಾಲ ಪಡೆದಿದ್ದು, ವಾರಕ್ಕೆ 1,500 ರಿಂದ 2,000 ರೂಪಾಯಿಯವರೆಗೆ ಬಡ್ಡಿ ಪಾವತಿಸುತ್ತಿದ್ದರು. ಆದರೆ, ಕೆಲವು ವಾರಗಳ ಬಡ್ಡಿ ಹಣ ನೀಡಲು ತಡವಾದ ಹಿನ್ನೆಲೆಯಲ್ಲಿ ಕೋಪಗೊಂಡ ಬಡ್ಡಿಕೋರರು ಈ ಹೇಯ ಕೃತ್ಯ ಎಸಗಿದ್ದಾರೆ.
ನಾಲ್ಕು ದಿನ ಮನಸೋಇಚ್ಛೆ ಹಲ್ಲೆ
ಅಕ್ಟೋಬರ್ 16 ರಂದು ಮಣಿಕಂಠನನ್ನು ಅಪಹರಿಸಿದ ದುಷ್ಕರ್ಮಿಗಳು, ರಹಸ್ಯ ಸ್ಥಳವೊಂದರಲ್ಲಿ ಆತನ ಕಾಲುಗಳನ್ನು ಕಟ್ಟಿಹಾಕಿ ನಾಲ್ಕು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಮರದ ಕಟ್ಟಿಗೆ ಮತ್ತು ಪೈಪ್‌ಗಳಿಂದ ಮನಸೋಇಚ್ಛೆ ಥಳಿಸಿದ್ದಲ್ಲದೆ, ಸಿಗರೇಟ್‌ನಿಂದ ದೇಹದ ವಿವಿಧ ಭಾಗ ಸುಟ್ಟು ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ಬಾಯಿಗೆ ಮೂತ್ರ ಸುರಿದು ಅತ್ಯಂತ ಕೂರ್ರವಾಗಿ ನಡೆದುಕೊಂಡಿದ್ದಾರೆ.
ಅಪರಚಿತ ವ್ಯಕ್ತಿಯ ನೆರವಿನಿಂದ ಎಸ್ಕೇಪ್ ಆದ ಮಣಿಕಂಠ
ಅಕ್ಟೋಬರ್ 20 ರಂದು ಅಪರಿಚಿತ ವ್ಯಕ್ತಿಯೊಬ್ಬನ ನೆರವಿನಿಂದ ತಪ್ಪಿಸಿಕೊಂಡ ಮಣಿಕಂಠ ಸ್ಥಳೀಯರ ಸಹಾಯದಿಂದ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಣಿಕಂಠ ಅವರಿಗೆ ಪ್ರಸ್ತುತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸಂತ್ರಸ್ತ ಮಣಿಕಂಠ ನೀಡಿದ ದೂರಿನನ್ವಯ ಮೀಟರ್ ಬಡ್ಡಿಕೋರರಾದ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ ಹಾಗೂ ಸುನೀಲ್ ಕತ್ತಿ ಎಂಬ ನಾಲ್ವರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




