Updated on: Nov 25, 2022 | 10:47 AM
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಕಬ್ಬೂರು, ಹಾವೇರಿ, ಚಿಕ್ಕಲಿಂಗದಹಳ್ಳಿ, ಕೋಡಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಅಧಿಕ ಹೋರಿಗಳು ಬಂದಿದ್ದವು.
ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ದೀಪಾವಳಿ ಹಬ್ಬ ಮತ್ತು ಕಾರ್ತಿಕೋತ್ಸವ ಸಮಯದಲ್ಲಿ ಹೋರಿ ಓಡಿಸುವ ಹಬ್ಬ ನಡೆಸುತ್ತಾ ಬಂದಿದ್ದಾರೆ. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ, ಹೋರಿ ಅಭಿಮಾನಿಗಳು ಹಾಗೂ ರೈತರು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಹೋರಿಗಳಿಗೆ ಮತ್ತಷ್ಟು ಹುರಿದುಂಬಿಸಿದರು.
ಹೋರಿ ಮಾಲೀಕರು ಹೋರಿಗಳಿಗೆ ಶೇಂಗಾ ಹಿಂಡಿ, ಶೇಂಗಾ ಹೊಟ್ಟು, ಮೇವು, ಮೊಟ್ಟೆ ಸೇರಿದಂತೆ ವಿವಿಧ ರೀತಿಯ ಪೌಷ್ಟಿಕಾಂಶ ಭರಿತ ಪದಾರ್ಥಗಳನ್ನು ತಿನ್ನಿಸಿ ಹೋರಿಗಳನ್ನು ಕಟ್ಟು ಮಸ್ತಾಗಿ ರೆಡಿ ಮಾಡಿರುತ್ತಾರೆ. ಕೊಬ್ಬರಿ ಹಾರ, ಜೂಲಾ, ಕೋಡಿಗೆ ಚಟ್ಟು, ಬಲೂನಿನ ಪೀಪಿ ಕಟ್ಟಿಕೊಂಡ ಹೋರಿಗಳು ಭರ್ಜರಿಯಾಗಿ ಮಿಂಚಿನ ಓಡ ಓಡಿದವು.
ಓಡುವ ಹೋರಿಗಳನ್ನು ತಡೆದು ನಿಲ್ಲಿಸುವುದಕ್ಕೆ ಅಖಾಡದಲ್ಲಿ ಪೈಲ್ವಾನರು ಎಲ್ಲಿಲ್ಲದ ಹರಸಾಹಸ ಪಡುತ್ತಾರೆ. ಕೆಲವು ಹೋರಿಗಳನ್ನು ಪೈಲ್ವಾನರು ತಡೆದು ನಿಲ್ಲಿಸಿದರೆ, ಬಹುತೇಕ ಹೋರಿಗಳು ಪೈಲ್ವಾನರ ಕೈಗೆ ಸಿಗದಂತೆ ಶರವೇಗದ ಓಟ ಓಡಿ ಗೆಲುವಿನ ದಡ ಸೇರಿದವು.
ಹೋರಿ ಮಾಲೀಕರು ಹೋರಿಗಳಿಗೆ ಪ್ರತಿದಿನ ಬೆಳಿಗ್ಗೆ ರನ್ನಿಂಗ್, ಸ್ವಿಮ್ಮಿಂಗ್ ಮಾಡಿಸಿ ಹೋರಿ ಹಬ್ಬಕ್ಕೆ ತಯಾರು ಮಾಡಿರುತ್ತಾರೆ. ಕೆಲವು ರೈತರು ಕೃಷಿ ಕೆಲಸದ ಜೊತೆಗೆ ಹೋರಿ ಹಬ್ಬಕ್ಕಾಗಿ ಹೋರಿಗಳನ್ನು ತಯಾರು ಮಾಡಿದರೆ ಕೆಲವರು ಹೋರಿ ಹಬ್ಬಕ್ಕೆ ಹೋರಿಗಳನ್ನು ತಯಾರು ಮಾಡುತ್ತಾರೆ.
ಹೀಗೆ ತಯಾರು ಮಾಡಿದ ಹೋರಿಗಳನ್ನು ತಂದು ಅಖಾಡದಲ್ಲಿ ಬಿಟ್ಟು ಓಡಿಸುತ್ತಾರೆ. ಕೊಬ್ಬರಿ ಹೋರಿ, ಯಾಕ್ಷನ್ ಹೋರಿ, ಗಗ್ಗರಿ ಹೋರಿ, ಪೀಪಿ ಹೋರಿ ಹೀಗೆ ಬಗೆಬಗೆಯ ಹೆಸರುಗಳಿಂದ ಅಲಂಕಾರಗೊಂಡ ಹೋರಿಗಳನ್ನು ಓಡಿಸಿ ಹೋರಿ ಮಾಲೀಕರು ಹಾಗೂ ಹೋರಿ ಹಬ್ಬದ ಅಭಿಮಾನಿಗಳು ಸಂಭ್ರಮ ಆಚರಿಸುತ್ತಾರೆ.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಹೋರಿ ಅಭಿಮಾನಿಗಳು ಹೋರಿಗಳ ಮಿಂಚಿನ ಓಟವನ್ನು ನೋಡಿ ಸಖತ್ ಖುಷಿಪಟ್ಟರು. ಒಟ್ಟಿನಲ್ಲಿ ಕಬ್ಬೂರು ಗ್ರಾಮದಲ್ಲಿನ ಹೋರಿ ಹಬ್ಬದಲ್ಲಿ ಹೋರಿ ಹಬ್ಬದ ಅಭಿಮಾನಿಗಳು ಭರ್ಜರಿ ಹೋರಿಗಳನ್ನು ಓಡಿಸುವ ಮೂಲಕ ಹೋರಿ ಹಬ್ಬವನ್ನು ಆಚರಿಸಿದರು.