Sheep Rearing: ಹಾವೇರಿ -ಕುರಿ ಸಾಕಿ ಜೀವನೋಪಾಯ ಕಟ್ಟಿಕೊಂಡ ದಂಪತಿ, ಜೀವನದಲ್ಲಿ ಹಿಂದಿರುಗಿ ನೋಡಿಲ್ಲ!
ಇತ್ತೀಚಿನ ದಿನಗಳಲ್ಲಿ ಕೃಷಿ ಅಂದ್ರೆ ನಷ್ಟದ ಬಾಬತ್ತು ಅನ್ನೋ ಮಾತಿದೆ. ಕೇವಲ ಕೃಷಿಯನ್ನೇ ನಂಬ್ಕೊಂಡು ಜೀವನ ಸಾಗಿಸೋದು ಕಷ್ಟದ ಕೆಲಸ. ಅಂಥಾದ್ರಲ್ಲಿ ಕೃಷಿ ಜೊತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡ್ಕೊಂಡು ರೈತರು ಸಮೃದ್ಧ ಜೀವನ ನಡೆಸಬಹುದಾಗಿದೆ -ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ.
ಪ್ರಚಲಿತ ದಿನಗಳಲ್ಲಿ ರೈತರಿಗೆ ಕೂಲಿ ಆಳುಗಳ ಕೊರತೆ ಮತ್ತು ಹವಾಮಾನ ವೈಪರಿತ್ಯದಿಂದ ಉತ್ತಮ ಬೆಳೆ ಬೆಳೆಯೋಕೆ ಸಾಧ್ಯವಾಗ್ತಿಲ್ಲ ಎಂಬುದು ಸತ್ಯದ ಮಾತು. ಇದರ ಹೊರತಾಗಿ ಬೆಳೆ ಬೆಳೆದರೂ ರೈತರಿಗೆ ಮಾರುಕಟ್ಟೆ ಬೆಲೆಯ ಸಮಸ್ಯೆಯೇ ಹೆಚ್ಚಾಗಿ ಕಾಡ್ತಿದೆ. ಇದ್ರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ತಿದ್ದಾರೆ. ಆದ್ರೆ ಕೃಷಿ ಜೊತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡ್ಕೊಂಡು ರೈತರು ಆರ್ಥಿಕವಾಗಿ ಸಮೃದ್ಧ ಜೀವನ ನಡೆಸಬಹುದಾಗಿದೆ.
ಅದು ಕುರಿಗಳಿಗಾಗಿಯೇ ನಿರ್ಮಾಣವಾಗಿರೋ ಶೆಡ್. ಆ ಶೆಡ್ ನಲ್ಲಿ ಕುರಿಗಳಿಗೆ ಮೇವು ಹಾಕ್ತಾ, ಪೋಷಣೆ ಮಾಡ್ತಾರೆ (Sheep Rearing) ಆ ದಂಪತಿ. ಹೌದು ಅವರು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದ (Hullatti in Rattihalli) ಕೆಂಚಮ್ಮ ಮತ್ತು ಹನುಮಂತಪ್ಪ ದಿವಗೀಹಳ್ಳಿ ದಂಪತಿ (Couple). ಕುರಿ ಶೆಡ್ ನಿರ್ಮಾಣಕ್ಕೂ ಮುನ್ನ ಇವರು ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದರು.
ನಂತರದ ದಿನದಲ್ಲಿ ಸೀಡ್ಸ್ ಬೆಳೆಗೆ ಆಧ್ಯತೆ ನೀಡಿ ಟೋಮ್ಯಾಟೋ, ಬೆಂಡೆ ಸೀಡ್ಸ್ ಬೆಳೆ ಬೆಳೆಯುತ್ತಿದ್ರು. ಆದ್ರೆ ಜಮೀನಿನಲ್ಲಿ ಕೂಲಿ ಆಳುಗಳ ಕೊರತೆ ಮತ್ತು ಅತಿಯಾದ ಖರ್ಚು ಇವರನ್ನು ಹೈರಾಣಗೊಳಿಸಿತು. ಇದ್ರಿಂದ ಅವರಿಗೆ ನಿರೀಕ್ಷಿತ ಆದಾಯ ಗಳಿಕೆ ಕಷ್ಟವಾಗಿ ಹೋಯಿತು. ಮುಂದೇನು ಮಾಡುವುದು ಅಂತಾ ಯೋಚನೆ ಮಾಡ್ತಿದ್ದಾಗ ಇವರ ಕುಟುಂಬಕ್ಕೆ ನೆರವಾಗಿದ್ದು ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (Mahatma Gandhi National Rural Employment Guarantee Act 2005 -MGNREGA).
ಹೌದು, 2021-22ನೇ ಸಾಲಿನಲ್ಲಿ ಹುಲ್ಲತ್ತಿ ಗ್ರಾಮ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ 10,115 ರೂಪಾಯಿ ಕೂಲಿ ಹಣ ಮತ್ತು 44,250 ರೂಪಾಯಿ ಸಾಮಗ್ರಿ ಹಣ ಸೇರಿ ಒಟ್ಟು 54,345 ರೂಪಾಯಿಗಳ ಪ್ರೋತ್ಸಾಹ ಧನ ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಬಂಡವಾಳವನ್ನೂ ಸೇರಿಸಿ ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ಕುರಿ ಶೆಡ್ ನಲ್ಲಿ ಒಂದು ಬಾರಿ 50 ಕ್ಕೂ ಹೆಚ್ಚು ಕುರಿಗಳ ಸಾಕಾಣಿಕೆ ಮಾಡುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ ಆ ದಂಪತಿ.
ಐದು ಎಕರೆ ಜಮೀನು ಹೊಂದಿದ್ದೇವೆ. ಇದರಲ್ಲಿ ಕುರಿ ಶೆಡ್ ನಿರ್ಮಿಸಿಕೊಂಡು ಕೃಷಿಯೊಂದಿಗೆ ಕುರಿ ಮತ್ತು ಕೋಳಿ ಸಾಕಾಣಿಕೆಗೆ ಆದ್ಯತೆ ನೀಡಿದ್ದೇವೆ. ನನ್ನ ಧರ್ಮಪತ್ನಿ ಕೆಂಚಮ್ಮ ಈ ಕುರಿ ಶೆಡ್ ನ ಮೇಲುಸ್ತುವಾರಿಯಾಗಿ ಕೆಲಸ ಮಾಡ್ತಿದ್ದಾರೆ. ಕಳೆದೆರಡು ವರ್ಷದಿಂದ ಈ ಕುರಿ ಶೆಡ್ ನ ಸಂಪೂರ್ಣ ಜವಾಬ್ದಾರಿಯನ್ನು ಅವರೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ನಾನು ಜಮೀನು ನೋಡಿಕೊಂಡರೆ, ಪತ್ನಿ ಕೆಂಚಮ್ಮ ಕುರಿ ಶೆಡ್ ನೋಡಿಕೊಂಡು ಹೋಗುತ್ತಿದ್ದಾರೆ. ಈವರೆಗೆ 200 ಕುರಿಗಳನ್ನು ಮಾರಾಟ ಮಾಡಿದ್ದೇವೆ.
ಮರಿ ಕುರಿಗಳ ಖರೀದಿ, ಮೇವು, ಶೇಂಗಾ ಹಿಂಡಿ ಶೆಡ್ ನಿರ್ಮಾಣ ಸೇರಿದಂತೆ ಇತರೆ ಖರ್ಚು, ವೆಚ್ಚವನ್ನು ತೆಗೆದರೆ ವಾರ್ಷಿಕವಾಗಿ ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದೇವೆ. ಅಷ್ಟೇ ಅಲ್ಲ ಕುರಿ ಸಾಕಾಣಿಕೆಯೊಂದಿಗೆ ಕೋಳಿ ಸಾಕಾಣಿಕೆಯನ್ನೂ ಮಾಡಿಕೊಂಡಿದ್ದೇವೆ. ಒಂದು ಬಾರಿ 20 ಸಾವಿರಕ್ಕೆ 40 ಕ್ಕೂ ಹೆಚ್ಚು ಕೋಳಿ ಖರೀದಿಸಿ, ಅವುಗಳನ್ನು ಬೆಳೆಸಿ ತತ್ತಿ ಮತ್ತು ಕೋಳಿಗಳನ್ನು ಮಾರಾಟ ಮಾಡಿ 75 ಸಾವಿರಕ್ಕೂ ಹೆಚ್ಚು ಲಾಭ ಗಳಿಸಿದ್ದೇವೆ. ನರೇಗಾ ಯೋಜನೆಯ ಹಣಕಾಸಿನ ನೆರವಿನ ಜೊತೆಗೆ ನಮ್ಮ ಹಣವನ್ನೂ ಸೇರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದೇವೆ ಎನ್ನುತ್ತಾರೆ ಕುರಿ ಸಾಕಾಣಿಕೆ ಮಾಡ್ತಿರೋ ರೈತ ಹನುಮಂತಪ್ಪ ದಿವಗೀಹಳ್ಳಿ.
ಇತ್ತೀಚಿನ ದಿನಗಳಲ್ಲಿ ಕೃಷಿ ಅಂದ್ರೆ ನಷ್ಟದ ಬಾಬತ್ತು ಅನ್ನೋ ಮಾತಿದೆ. ಕೇವಲ ಕೃಷಿಯನ್ನೇ ನಂಬ್ಕೊಂಡು ಜೀವನ ಸಾಗಿಸೋದು ಕಷ್ಟದ ಕೆಲಸ. ಅಂಥಾದ್ರಲ್ಲಿ ಕೃಷಿ ಜೊತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡ್ಕೊಂಡು ರೈತರು ಸಮೃದ್ಧ ಜೀವನ ನಡೆಸಬಹುದಾಗಿದೆ. ಅದ್ರಲ್ಲೂ ಸರಕಾರದ ಉದ್ಯೋಗ ಖಾತ್ರಿ ಯೋಜನೆ ನೆರವು ಪಡೆದುಕೊಂಡು ರೈತರು ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡ್ಕೊಂಡು ಆರ್ಥಿಕವಾಗಿ ಸಬಲತೆ ಹೊಂದಬಹುದಾಗಿದೆ ಎಂದು ಭರವಸೆಯ ಮಾತನ್ನಾಡುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ. (ವರದಿ: ಪ್ರಭುಗೌಡ ಎನ್. ಪಾಟೀಲ, ಟಿವಿ 9, ಹಾವೇರಿ)
Also Read:
Also Read:
ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್ ಬಂದ್!