ಶಿಗ್ಗಾಂವಿ ಪಟ್ಟಣದ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಮಾಡಿದ್ದ ಆರೋಪಿ ಮಂಜುನಾಥ್ ಅರೆಸ್ಟ್

| Updated By: ಆಯೇಷಾ ಬಾನು

Updated on: May 19, 2022 | 6:45 PM

ಏ.19ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಆರೋಪಿ ಮಂಜುನಾಥ್ ಗುಂಡಿನ ದಾಳಿ ನಡೆಸಿದ್ದ. ಮುಂದೆ ಸೀಟಿನ ಮೇಲೆ ಕಾಲಿಟ್ಟು ಕುಳಿತಿದ್ದಕ್ಕೆ ವಸಂತಕುಮಾರ್ ಮೇಲೆ ಫೈರಿಂಗ್ ಮಾಡಿದ್ದ.

ಶಿಗ್ಗಾಂವಿ ಪಟ್ಟಣದ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಮಾಡಿದ್ದ ಆರೋಪಿ ಮಂಜುನಾಥ್ ಅರೆಸ್ಟ್
ಶಿಗ್ಗಾಂವಿ ಪಟ್ಟಣದ ಚಿತ್ರಮಂದಿರದಲ್ಲಿ ಶೂಟೌಟ್
Follow us on

ಹಾವೇರಿ:ಸಿಎಂ ತವರು ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ. ಆ ಒಂದು ಶೂಟೌಟ್ ಪ್ರಕರಣ ಈಡಿ ಜಿಲ್ಲೆಯ ಜನರನ್ನೆ ಬೆಚ್ಚಿ ಬೀಳಿಸಿತ್ತು. ಕೆಜಿಎಫ್ 2 ಚಿತ್ರವೀಕ್ಷಣೆ ವೇಳೆ ಅಲ್ಲಿ ಗುಂಡಿನ ಸದ್ದು ಮೊಳಗಿತ್ತು. ಪ್ರಕರಣದ ಆರೋಪಿ ಬಂಧಿಸೋದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಬರೋಬ್ಬರಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿತ್ರಮಂದಿರದಲ್ಲಿ ಫೈರಿಂಗ್ ಮಾಡಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತನಿಂದ 1 ಗನ್, 15 ಜೀವಂತ ಗುಂಡು, ಸ್ಕೂಟಿ, 1 ಮೊಬೈಲ್ ಜಪ್ತಿ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಘಟನೆ ಹಿನ್ನೆಲೆ
ಏಪ್ರಿಲ್ 19,2022. ಸಮಯ ರಾತ್ರಿ ಹತ್ತು ಗಂಟೆ. ಸ್ಥಳ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರ. ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡ್ತಿದ್ರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಮಂದಿರದಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಎಂಬ ಯುವಕನ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೆ ಗಾಯಾಳುವಿಗೆ ಶಿಗ್ಗಾಂವಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಈಗಲೂ ವಸಂತಕುಮಾರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ರು. ಚಿತ್ರಮಂದಿರದಲ್ಲಿ ಕತ್ತಲು ಕಳೆದು ಬೆಳಕಾಗೋವಷ್ಟರಲ್ಲಿ ಗುಂಡು ಹಾರಿಸಿದ್ದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಹೀಗಾಗಿ ಆರೋಪಿಯನ್ನ ಗುರ್ತಿಸೋದು ಅಷ್ಟು ಸುಲಭದ ಕೆಲಸ ಆಗಿರ್ಲಿಲ್ಲ. ಆದ್ರೂ ತನಿಖೆಗೆ ಇಳಿದಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ ಅಲಿಯಾಸ್ ಸಂತೋಷ ಅಲಿಯಾಸ್ ಮಲ್ಲಿಕ್ ಪಾಟೀಲ ಅಂತಾ ಗುರುತು ಪತ್ತೆ ಮಾಡಿದ್ರು. ಆದ್ರೆ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದಂಗೆ ಗೋವಾ, ಮಹಾರಾಷ್ಟ್ರ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಆರೋಪಿಯ ಹೆಡೆಮುರಿ ಕಟ್ಟಲೇಬೇಕು ಅಂತಾ ಆತನ ಬೆನ್ನು ಬಿದ್ದಿದ್ದ ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ‌. ಇದನ್ನೂ ಓದಿ: ಅಸ್ಸಾಂ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಶಾಸಕರನ್ನು ಬೆನ್ನ ಮೇಲೆ ಹೊತ್ತು ಸಾಗಿದ ರಕ್ಷಣಾ ಕಾರ್ಯಕರ್ತ; ವಿಡಿಯೊ ವೈರಲ್

ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಇವತ್ತು(ಮೇ 19) ಬೆಳ್ಳಂಬೆಳಿಗ್ಗೆ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಅಲ್ದೆ ಘಟನೆ ನಂತರ ಆರೋಪಿ ಮಂಜುನಾಥ ಪರಾರಿ ಆಗಲು ನೆರವು ನೀಡಿದ್ದ ಬಂಕಾಪುರ ಪಟ್ಟಣದ ನಿವಾಸಿ ಇಸ್ಮಾಯಿಲ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಚಿತ್ರಮಂದಿರದಲ್ಲಿ ಗಾಯಾಳು ವಸಂತಕುಮಾರ ಹಾಗೂ ಆತನ ಸ್ನೇಹಿತರು ಚಿತ್ರವೀಕ್ಷಣೆ ಮಾಡೋವಾಗ ಅವರು ಕುಳಿತಿದ್ದ ಮುಂದಿನ ಸೀಟು ಖಾಲಿ ಇತ್ತು. ಹೀಗಾಗಿ ಖಾಲಿ ಸೀಟಿನ ಮೇಲೆ ಕಾಲಿಟ್ಟು ಕುಳಿತುಕೊಂಡಿದ್ರಂತೆ. ಆಗ ಕಾಲು ತೆಗೆಯುವಂತೆ ಆರೋಪಿ ಮಂಜುನಾಥ ತಾಕೀತು ಮಾಡಿದ್ದ. ಆಗ ಮಾತಿಗೆ ಮಾತು ಬೆಳೆದಿತ್ತು. ನಂತರ ಆರೋಪಿ ಮಂಜುನಾಥ ಕೆಲವು ನಿಮಿಷಗಳ ಚಿತ್ರಮಂದಿರದಿಂದ ಹೊರಗೆ ಹೋಗಿ ಮತ್ತೆ ಒಳಗೆ ಬಂದು ವಸಂತಕುಮಾರ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದ. ಘಟನೆಯಲ್ಲಿ ವಸಂತಕುಮಾರ ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿದ್ದವು. ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾಂವಿ ಪ್ರಕರಣ ನಡೆದಿದ್ದರಿಂದ ಜಿಲ್ಲೆಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಪ್ರಕರಣ ಬೇಧಿಸೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಶಿಗ್ಗಾಂವಿ ಠಾಣೆ ಪೊಲೀಸರ ತಂಡ ಕೊನೆಗೂ ಶೂಟೌಟ್ ಮಾಡಿ ಪರಾರಿ ಆಗಿದ್ದ ಆರೋಪಿಯನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಶೂಟೌಟ್ ಪ್ರಕರಣದ ಆರೋಪಿ ಬಂಧನದಿಂದ ಶಿಗ್ಗಾಂವಿ ಪಟ್ಟಣ ಹಾಗೂ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ

Published On - 6:36 pm, Thu, 19 May 22