ಹಾವೇರಿ, ಏ.05: ರಾಜ್ಯಾದ್ಯಂತ ಈ ಭಾರಿಯ ಬರಗಾಲಕ್ಕೆ ಕುಡಿಯಲು ನೀರು ಸಿಗದೆ(Water Crisis) ಜನ-ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹಾವೇರಿ(Haveri) ಜಿಲ್ಲೆ ಏನು ಹೊರತಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ 70 ಪ್ರತಿಶತ ಮಳೆ ಕಡಿಮೆಯಾಗಿ ಇರುವ ಪ್ರಮುಖ ನಾಲ್ಕು ನದಿಗಳು ಬತ್ತಿಹೋಗಿದೆ. ಕೆರೆ-ಕಟ್ಟೆಗಳೆಲ್ಲ ಖಾಲಿ-ಖಾಲಿಯಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಹಳ್ಳಿ-ಹಳ್ಳಿಗಳಲ್ಲಿ ಮಹಿಳೆಯರು ನೀರಿಗಾಗಿ ಕೊಳಾಯ ಮುಂದೆ ದಿನವಿಡಿ ನಿಲ್ಲುತ್ತಿದ್ದಾರೆ. ಇದನ್ನು ಮನಗಂಡ ಹಾನಗಲ್ಲ ತಾಲೂಕಿನ ಬಾಳಂಬಿಡ ಗ್ರಾಮದ ಸಂತೋಷ ದುಂಡಣ್ಣನವರ್ ಮತ್ತು ಅವರ ಸ್ನೇಹಿತರ ಬಳಗ ಇದೀಗ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮುಂದಾಗಿದೆ.
ಹೌದು, ತಮ್ಮದೇ ಆದ ಟ್ರ್ಯಾಕ್ಟರ್ ತಗೆದುಕೊಂಡು ಅದಕ್ಕೆ ತಾವೇ ಡಿಸೇಲ್ ಹಾಕಿಕೊಂಡು ಅದರಲ್ಲಿ ಸಾವಿರ ಲೀಟರ್‌ನ ಎರಡು ಸಿಂಟ್ಯಾಕ್ಸ್‌ಗಳನ್ನು ಇಟ್ಟುಕೊಂಡು ಗ್ರಾಮದ ಜನರ ಕುಡಿಯುವ ನೀರಿನ ದಾಹ ತೀರಿಸಲು ಈ ಯುವಪಡೆ ಮುಂದಾಗಿದೆ. ಈ ಯುವಕರ ಕಾರ್ಯಕ್ಕೆ ಗ್ರಾಮದ ರೈತರು ಕೈ ಜೋಡಿಸಿದ್ದಾರೆ. ಜಮೀನುಗಳಲ್ಲಿ ಇರುವ ಬೋರ್ವೇಲ್ನಿಂದ ಉಚಿತವಾಗಿ ನೀರು ಒದಗಿಸುತ್ತಿದ್ದಾರೆ. ಟ್ರ್ಯಾಕ್ಟರ್‌ನಲ್ಲಿರುವ ಸಿಂಟ್ಯಾಕ್ಸ್‌ಗಳಿಗೆ ನೀರು ತುಂಬಿಕೊಂಡು ಗ್ರಾಮಕ್ಕೆ ಆಗಮಿಸುವ ಯುವಕರು, ಗ್ರಾಮದ ಮನೆ-ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ:Water Crisis: ಬೆಂಗಳೂರಿನಂತೆಯೇ ಸಂಕಷ್ಟಕ್ಕೀಡಾದ ಮಂಡ್ಯ, 38 ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ
ಗ್ರಾಮದ ಪ್ರಮುಖ ಓಣಿಯ ವೃತ್ತದಲ್ಲಿ ಟ್ರ್ಯಾಕ್ಟರ್ ನಿಲ್ಲಿಸುವ ಯುವಕರು, ಮಹಿಳೆಯರು ತರುವ ಕೊಡಪಾನಗಳಿಗೆ ನೀರು ತುಂಬಿಸುತ್ತಾರೆ. ಒಂದು ದಿನಕ್ಕೆ 10 ಸಾವಿರ ಲೀಟರ್ ನೀರಿನಿಂದ ಹಿಡಿದು 12 ಸಾವಿರ ಲೀಟರ್ವರೆಗೆ ಈ ಯುವಕರು ಕುಡಿಯುವ ನೀರು ಪೂರೈಸುತ್ತಿದ್ದಾರೆ. ಪ್ರತಿ ಮನೆಗೆ ನಾಲ್ಕು ಕೊಡಪಾನಗಳಂತೆ ಸರತಿಯಲ್ಲಿ ನಿಂತ ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಾರೆ. ಈ ರೀತಿ ಮುಂಜಾನೆ ಆರಂಭವಾದ ಈ ಯುವಕರ ಕಾರ್ಯಕ್ಕೆ ಊಟದ ಸಮಯ ಸಹ ಸಿಗುವುದಿಲ್ಲ. ಒಟ್ಟಾರೆ ಈ ಯುವಕರ ಕಾರ್ಯ ಉಳಿದ ಗ್ರಾಮದ ಯುವಕರಿಗೂ ಸ್ಪೂರ್ತಿಯಾಗಲಿ ಎನ್ನುವುದು ನಮ್ಮ ಆಶಯ. ಜೊತೆಗೆ ಈ ಯುವಕರು ಈ ಕಾರ್ಯವನ್ನು ಮಳೆಗಾಲ ಆರಂಭವಾಗುವರೆಗೂ ಮುಂದುವರೆಸುವ ಅನಿವಾರ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ