ಕನ್ನಡ ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ: ಕೈ ಬೀಸಿ ಕರಿಯುತ್ತಿದೆ ಹೀಗೊಂದು ಸರ್ಕಾರಿ ಬಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2022 | 7:51 PM

ನಿರ್ವಾಹಕ ಶಶಿಕುಮಾರ ಬೋಸ್ಲೆ ಮತ್ತು ಚಾಲಕ ಆಂಜನೇಯ ಇಬ್ಬರಿಗೂ ಕನ್ನಡ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇಬ್ಬರು ಅಪ್ಪಟ ಕನ್ನಡ‌ ಪ್ರೇಮಿಗಳು. ಬಸ್ಸಿನ ಒಳಗೆ ಪ್ರವೇಶಿಸಿದ್ರೆ ಕನ್ನಡದ ಕಂಪು ಸೂಸುತ್ತದೆ.

ಕನ್ನಡ ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ: ಕೈ ಬೀಸಿ ಕರಿಯುತ್ತಿದೆ ಹೀಗೊಂದು ಸರ್ಕಾರಿ ಬಸ್
ಕನ್ನಡದ ಬಸ್
Follow us on

ಹಾವೇರಿ: ಕನ್ನಡ (Kannada) ಅಂದರೆ ಸಾಕು ಏನೋ ಒಂಥರಾ ಮೈ ರೋಮಾಂಚನಗೊಳ್ಳುತ್ತದೆ. ಅದರಲ್ಲಿಯೂ ಇಲ್ಲೊಂದು ಸರಕಾರಿ ಸಾರಿಗೆ ಸಂಸ್ಥೆಯ ಬಸ್ಸಿದೆ (government bus). ಈ ಬಸ್ಸನ್ನೇರಿದ್ರೆ ಸಾಕು ಎಂಥವರಲ್ಲೂ ಕನ್ನಡಾಭಿಮಾನ ಮೂಡುತ್ತೆ. ಬಸ್ಸಿನ ಹೊರಭಾಗ, ಒಳಭಾಗ, ಕೂರುವ ಆಸನ ಸೇರಿ ಎಲ್ಲೆಲ್ಲೂ ಕನ್ನಡದ ಕಲರವ. ಕನ್ನಡ ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅಂತಾ ಬಸ್ಸು ಎಲ್ಲರನ್ನೂ ತನ್ನತ್ತ ಕೈಬೀಸಿ ಕರಿಯುತ್ತಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ವಾಯುವ್ಯ ಸಾರಿಗೆ ಸಂಸ್ಥೆಯ ಡಿಪೋಗೆ ಸೇರಿದ ಬಸ್ಸಿನ ಬಗ್ಗೆ ನಾವು ಹೇಳುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಈ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಬಸ್ಸನ್ನು ಕನ್ನಡದ ತೇರಿನಂತೆ ಶೃಂಗಾರ ಮಾಡಿದ್ದಾರೆ. ನಿರ್ವಾಹಕ ಶಶಿಕುಮಾರ ಬೋಸ್ಲೆ ಮತ್ತು ಚಾಲಕ ಆಂಜನೇಯ ಇಬ್ಬರಿಗೂ ಕನ್ನಡ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇಬ್ಬರು ಅಪ್ಪಟ ಕನ್ನಡ‌ ಪ್ರೇಮಿಯಾಗಿದ್ದಾರೆ. ಬಸ್ಸಿನ ಒಳಗೆ ಪ್ರವೇಶಿಸಿದ್ರೆ ಪ್ರತಿಯೊಂದು ಸೀಟುಗಳು ಕನ್ನಡದ ಕಂಪು ಸೂಸುತ್ತಿವೆ.

ಬಸ್​ನಲ್ಲಿ ದೊಡ್ಡದಾದ ಸ್ಪೀಕರ್​​ಗಳನ್ನು ಅಳವಡಿಸಿ ಬಸ್ಸಿನಲ್ಲಿ ಕುಳಿತವರಿಗೆ ಕನ್ನಡ ಹಾಡುಗಳು ಕೇಳಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನ ಮಾಡಲಾಗಿದೆ.‌ ಪ್ರತಿದಿನ ಬಸ್ ಹಿರೇಕೆರೂರಿನಿಂದ ಹಾವೇರಿ ಮಾರ್ಗವಾಗಿ ಗಡಿ ಜಿಲ್ಲೆ ಬೆಳಗಾವಿಗೆ ಹೋಗಿ ಬರುತ್ತದೆ. ಬಸ್ಸನ್ನು ಕನ್ನಡಮಯ ಮಾಡೋ ಮೂಲಕ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಪ್ರತಿನಿತ್ಯ ಕನ್ನಡದ ಪ್ರೇಮವನ್ನು ಮೆರೆಯುತ್ತಿದ್ದಾರೆ.

ಹಿರೇಕೆರೂರು ಡಿಪೋದಲ್ಲಿ ಕಂಡಕ್ಟರ್ ಆಗಿರೋ ಶಶಿಕುಮಾರ ಪ್ರವೃತ್ತಿಯಲ್ಲಿ ಕನ್ನಡ ಪ್ರೇಮಿ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಕನ್ನಡಕ್ಕಾಗಿ ಏನಾದ್ರೂ ಮಾಡಬೇಕು ಅಂದುಕೊಂಡು ಬಸ್ಸಿನ ತುಂಬ ಕನ್ನಡ ಎನ್ನುವಂತೆ ಮಾಡಿದ್ದಾರೆ. ಪ್ರಯಾಣಿಕರು ಬಸ್ಸಿನ ಒಳಗೆ ಪ್ರವೇಶ ಮಾಡಿದ್ರೆ ಸಾಕು ಕಣ್ಣಿಗೆ ಕನ್ನಡದ ಹಬ್ಬವೋ ಹಬ್ಬ. ಬಸ್ಸಿನ ಕಿಟಕಿ, ಸೀಟುಗಳು, ಮೇಲ್ಚಾಚಣೆ ಸೇರಿದಂತೆ ಬಸ್ಸಿನ ತುಂಬ ಕುವೆಂಪು, ಬೇಂದ್ರೆ, ಗಿರೀಶ ಕಾರ್ನಾಡ್ ಸೇರಿದಂತೆ ಖ್ಯಾತನಾಮ ಕನ್ನಡದ ಕವಿಗಳ ಭಾವಚಿತ್ರಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು, ಐತಿಹಾಸಿಕ ಪರಂಪರೆ ಬಿಂಬಿಸುವ ಸ್ಥಳಗಳ ಭಾವಚಿತ್ರಗಳು ಹೀಗೆ ಕನ್ನಡದ ಖ್ಯಾತಿ ಸಾರುವ ಹಲವು ವಿಷಯಗಳು ಬಸ್ಸಿನಲ್ಲಿ ಕಾಣುತ್ತವೆ.

ಬಸ್ಸಿನ ಪ್ರತಿಯೊಂದು ಸೀಟುಗಳಲ್ಲಿ ಪ್ರತಿದಿನದ ಒಂದೊಂದು ಕನ್ನಡ ಪತ್ರಿಕೆ, ಒಂದೊಂದು ಕನ್ನಡ ಪುಸ್ತಕವನ್ನು ಇರಿಸಿ ಪ್ರಯಾಣಿಕರಿಗೆ ಕನ್ನಡವನ್ನು ಓದುತ್ತಾ ಪ್ರಯಾಣ ಮಾಡೋ ವ್ಯವಸ್ಥೆ ಮಾಡಿದ್ದಾರೆ. ಬಸ್ಸಿನ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ಮೂರ್ತಿ ಜೊತೆಗೆ ಈಗ ಕರ್ನಾಟಕ ರತ್ನ ಪುನೀತ್ ರಾಜಕುಮಾರರ ಭಾವಚಿತ್ರವನ್ನು ಹಾಕಿ‌ ಪುನೀತ್ ಸ್ಮರಣೆ ಮಾಡಲಾಗುತ್ತಿದೆ. ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡೋ ಕನ್ನಡ ಗೊತ್ತಿಲ್ಲದ ಪ್ರಯಾಣಿಕರು ಸಹ ಬಸ್ಸಿನಲ್ಲಿ ಕುಳಿತು ಊರು ತಲುಪೋ ವೇಳೆಗೆ ಕನ್ನಡವನ್ನು ಅರಿತುಕೊಳ್ತಾರೆ.

ಕನ್ನಡದ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಕಂಡಕ್ಟರ್ ಶಶಿಕುಮಾರ ಮತ್ತು ಆಂಜನೇಯ ಮಾಡುತ್ತಿರುವ ಕನ್ನಡದ ಕೆಲಸ ನಿಜಕ್ಕೂ ಮೆಚ್ಚುವಂತಹುದ್ದೆ. ಈ ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡೋ ಪ್ರಯಾಣಿಕರಿಗಂತೂ ಪ್ರಯಾಣದ ಸಮಯ ಮುಗಿಯೋ ವೇಳೆಗೆ ಕನ್ನಡದ ಬಗ್ಗೆ ಅಭಿಮಾನ ಮತ್ತು ಪ್ರೀತಿ ಮೂಡೋದಂತೂ ಗ್ಯಾರಂಟಿ ಅನ್ನೋ ಹಾಗೆ ಬಸ್ಸನ್ನು ಕನ್ನಡದ ಕೆಲಸಕ್ಕೆ ಸಜ್ಜುಗೊಳಿಸಿದ್ದಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9, ಹಾವೇರಿ