ಆ ಗ್ರಾಮದಲ್ಲಿ ಕೆರೆಕಟ್ಟೆಗಳೆಲ್ಲಾ ಖಾಲಿ ಖಾಲಿಯಾಗಿವೆ (summer). ಅಂತರ್ಜಲ ಪಾತಾಳ ಸೇರಿದೆ. ಇದ್ದ ಬೋರ್ ವೇಲ್ ಗಳು ಬತ್ತುತ್ತಿವೆ. ಹೀಗಾಗಿ ವನ್ಯಜೀವಿಗಳು (wild life) ಜೀವಜಲಕ್ಕಾಗಿ (thirst) ಗ್ರಾಮದಕಡೆ ಲಗ್ಗೆ ಇಡುತ್ತಿವೆ. ಇಂಥಾ ಶೋಚನೀಯ ಸ್ಥಿತಿಯಲ್ಲಿ ಆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಗಂಗೆ ಮೂರು ಅಡಿಯಲ್ಲಿ ಪ್ರತ್ಯಕ್ಷ ವಾಗಿದ್ದಾಳೆ! ಇದು ಬೆಟ್ಟದ ಒಡೆಯ ಬಸವೇಶ್ವರನ ಪವಾಡ ಅಂತಿದ್ದಾರೆ ಗ್ರಾಮಸ್ಥರು.
ಹೌದು ಈ ಬಾರಿ ವರುಣನ ಅವಕೃಪೆಗೆ ರಾಜ್ಯದಲ್ಲಿ ಭೀಕರ ಬರಗಾಲದ ಕರಿಛಾಯೆ ನೆಟ್ಟಿದೆ. ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ರಾಜ್ಯದಲ್ಲಿ ಎದುರಾಗಿರುವ ಜಲಕ್ಷಾಮ ಬಗೆಹರಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಇಂಥಾ ಶೋಚನೀಯ ಸ್ಥಿತಿಯಲ್ಲಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹಿರೇಬಾಸೂರು ಮಿಸಲು ಅರಣ್ಯ ಪ್ರದೇಶದಲ್ಲಿ ಅಚ್ಚರಿ ಬೆಳವಣಿಗೆ ನಡೆದಿದೆ. ನೀರಿನ ದಾಹ ನೀಗಿಸಿಕೊಳ್ಳಲು ಕುರಿಗಾಯಿ ಬೆಟ್ಟದ ಮೇಲೆ ಮೂರಡಿ ನೆಲ ತೋಡಿದ್ದಕ್ಕೆ ನೀರು ಜಿನುಗುತ್ತಿದೆ. ಇದು ಬೆಟ್ಟದ ಒಡೆಯ ಬಸವೇಶ್ವರನ ಪವಾಡ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕುರಿಗಾಹಿಗಳ ಬಾಯಿ ಹರಕೆಯಿಂದ ಬೆಟ್ಟದ ಮೇಲೆ ತೋಡಿದ ಮೂರಡಿ ಗುಂಡಿಯಲ್ಲಿ ಸಿಹಿಯಾದ ನೀರು ಬಂದಿದೆ. ಈ ಬಾರಿ ಬರಗಾಲದಿಂದ ಸಾವಿರ ಅಡಿ ಬೋರ್ ಕೊರೆಸಿದರೂ ಒಂದು ತೊಟ್ಟು ನೀರು ಬರುತ್ತಿಲ್ಲಾ. ಆದರೆ ಬೆಟ್ಟದ ಮೇಲೆ ನೀರು ಬಂದಿರುವುದು ಪವಾಡ ಅಂತಿದ್ದಾರೆ ಗ್ರಾಮಸ್ಥರು. ಈ ವಿಸ್ಮಯ ನೋಡಲು ತಂಡೋಪತಂಡವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದಾರೆ.
ಗಂಗೆಗೆ ಅರಿಶಿನ, ಕುಂಕುಮ ಹಚ್ಚಿ, ಹಣ್ಣು ಕಾಯಿ ನೈವೇದ್ಯ ಮಾಡಿ ಪೂಜೆ ಮಾಡುತ್ತಿದ್ದಾರೆ. ಜೊತೆಗೆ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೇ ಈ ನೀರಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಮಾತನಾಡುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಹೆಕ್ಟೇರ್ ಮಿಸಲು ಅರಣ್ಯ ಪ್ರದೇಶದಲ್ಲಿ ಈ ವಿಸ್ಮಯ ನಡೆದಿದೆ.
ಈ ಅರಣ್ಯದಲ್ಲಿ ಕೃಷ್ಣ ಮೃಗ, ಜಿಂಕೆ, ಸಾರಂಗ, ಹಂದಿ ಸೇರಿದಂತೆ ವಿವಿಧ ವನ್ಯಜೀವಿ ಜೀವಿಸುತ್ತಿವೆ. ಮೂಕ ಪ್ರಾಣಿಗಳ ರೋಧನೆ ನೋಡಲಾರದೆ ಗಂಗೆ ಪ್ರತ್ಯಕ್ಷವಾಗಿದ್ದಾಳೆ! ಈ ನೀರಿನ ಸೆಲೆಯನ್ನು ಅಭಿವೃದ್ಧಿ ಪಡೆಸಿ ನೀರು ಸಂಗ್ರಹಿಸಿ ವನ್ಯ ಜೀವಿಗಳಿಗೆ ನೀರು ಒದಗಿಸಬೇಕು ಎಂದು ಅರಣ್ಯ ಅಧಿಕಾರಿಗಳನ್ನು ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಾರೆ ಹನಿ ನೀರಿಗೂ ಪರದಾಡುತ್ತಿರುವ ಸಂದರ್ಭದಲ್ಲಿ ನೀರು ಮೂರು ಅಡಿಯಲ್ಲಿ ಬೆಟ್ಟದ ಮೇಲೆ ಜಿನುಗುತ್ತಿರುವುದು ಪವಾಡವೇ ಸರಿ. ಅದೇನೆ ಇರಲಿ ಅರಣ್ಯ ಅಧಿಕಾರಿಗಳು ಇದನ್ನು ಅಭಿವೃದ್ಧಿ ಪಡಿಸಬೇಕು ವನ್ಯಜೀವಿಗಳ ನೀರಿನ ಬವಣೆ ನೀಗಿಸಬೇಕು ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರ ಆಗ್ರಹ.
(ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Mon, 25 March 24