ಹಾವೇರಿ: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಮುಂದುವರೆದಿದ್ದು, ನದಿಯ ನಡುವಿನ ಮಣ್ಣಿನ ಗುಡ್ಡೆಯ ಮೇಲೆ ಸಿಲುಕಿದ್ದ ಎರಡು ಮಂಗಗಳ (Monkey) ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆ ಹಾನಗಲ್ ತಾಲೂಕಿನ ತುಮರಿಕೊಪ್ಪ ಗ್ರಾಮದ ಬಳಿ ಇರೋ ವರದಾ ನದಿಯಲ್ಲಿ ಕಂಡುಬಂದಿದೆ. ಮಂಗಗಳು ಮಣ್ಣಿನ ಗುಡ್ಡೆ ಮೇಲಿದ್ದಾಗ ಏಕಾಏಕಿ ನದಿಗೆ ನೀರು ಬಂದಿದ್ದರಿಂದ ಹೊರಬರಲಾಗದೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದವು. ಕಳೆದೆರಡು ದಿನಗಳಿಂದ ನದಿಯ ನಡುವಿನ ಮಣ್ಣಿನ ಗುಡ್ಡೆಯ ಮೇಲೆ ಸಿಲುಕಿ ಹೊರಬರಲಾಗದೆ ಮಂಗಗಳು ಪರದಾಡುತ್ತಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ನಡುಗಡ್ಡೆಗೆ ತೆರಳಿ ಮಂಗಗಳ ರಕ್ಷಣೆ ಮಾಡಿದ್ದಾರೆ. ತಿನ್ನಲು ಹಣ್ಣು ಕೊಟ್ಟು ಮಣ್ಣಿನ ಗುಡ್ಡೆ ಮೇಲಿನಿಂದ ಮಂಗಗಳನ್ನು ಕೆಳಗಿಸಿ ಬಲೆಯಲ್ಲಿ ಹಾಕಿಕೊಂಡು ಬಂದ ಸಿಬ್ಬಂದಿಗಳು ನದಿ ದಾಟಿಸಿದ್ದಾರೆ. ನದಿಯ ದಡಕ್ಕೆ ಬಂದು ಬಲೆಯಿಂದ ಮಂಗಗಳನ್ನು ಬಿಡುತ್ತಿದ್ದಂತೆ ಬದುಕಿದೆಯಾ ಬಡಜೀವವೆ ಅಂತಾ ಮಂಗಗಳು ಓಡೋಡಿ ಹೋದವು.
ಇದನ್ನೂ ಓದಿ: ಕೊಡಗಿನಲ್ಲಿ ಇಂದೂ ಕೂಡಾ ಶಾಲಾ -ಕಾಲೇಜುಗಳಿಗೆ ರಜೆ; ಉಡುಪಿಯಲ್ಲಿ ಭಾರಿ ಮಳೆಯ ಎಚ್ಚರಿಕೆ
ಕಬ್ಬು, ಚೆಂಡು ಹೂವು, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆ ಹಾನಿ:
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆ ಜಿಲ್ಲೆಯ ನದಿ ಮತ್ತು ಹಳ್ಳಗಳಲ್ಲಿ ಭರಪೂರ ನೀರು ಹರಿಯುತ್ತಿದೆ. ನದಿ ಮತ್ತು ಹಳ್ಳದ ನೀರು ಜಮೀನಿಗೆ ನುಗ್ಗಿದ್ದರಿಂದ ನೂರಾರು ಎಕರೆ ಬೆಳೆ ಹಾಳಾಗಿದ್ದು, ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ಬಳಿ ಜಮೀನುಗಳು ಕೆರೆಯಂತಾಗಿವೆ. ಕಬ್ಬು, ಚೆಂಡು ಹೂವು ಮತ್ತು ಮೆಕ್ಕೆಜೋಳದ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆತು ಹಾಳಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ. ನೀರಿನಲ್ಲಿ ನಿಂತು ಬೆಳೆ ಹಾಳಾದ್ರೂ ರೈತರ ಪರಿಸ್ಥಿತಿ ಅವಲೋಕಿಸದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Rain: ಮಳೆಯ ಆರ್ಭಟಕ್ಕೆ ಕರ್ನಾಟಕ ತತ್ತರ; ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ
ಮಂಗಳೂರಿನ ಪಿಲಿಕುಳ ಮೃಗಾಲಯ ಬಹುತೇಕ ಜಲಾವೃತ:
ಮಂಗಳೂರು: ಮೊದಲ ಬಾರಿಗೆ ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ ಮಳೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ. ನಗರದ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ಭಾರೀ ಪ್ರಮಾಣದ ನೀರು ನುಗ್ಗಿದ್ದು, ಕೆಲ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆ ಉಂಟಾಗಿದೆ. ಎಕರೆಗಟ್ಟಲೆ ಇರೋ ಪಿಲಿಕುಳ ಮೃಗಾಲಯದ ಬಹುತೇಕ ಭಾಗ ನೀರಿನಲ್ಲಿ ಮುಳುಗಡೆಯಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ ಉಂಟಾಗಿದೆ. 2004ರಲ್ಲಿ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ನೆರೆ ಬಂದಿದ್ದು, ಪಾದಚಾರಿ ಮಾರ್ಗ ಬಂದ್ ಮಾಡಲಾಗಿದೆ.