ಹಾವೇರಿ, ಜೂನ್ 28: ಬ್ಯಾಡಗಿ (Byadagi) ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಜನರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ (TT Vehicle) ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಪರಶುರಾಮ್ (45), ಭಾಗ್ಯ (40), ನಾಗೇಶ (50),
ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ, ಚಾಲಕ ಆದರ್ಶ್ (23),
ಮಾನಸ (24), ರೂಪಾ (40), ಮಂಜುಳಾ (50) ಮೃತರು ಮೃತಪಟ್ಟವರು. ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತ ನಾಗೇಶ್ ಎಮ್ಮೆಹಟ್ಟಿ ಗ್ರಾಮದಲ್ಲಿ ಕೃಷಿಕರಾಗಿದ್ದಾರೆ. ನಾಗೇಶ್ ಪತ್ನಿ ವಿಶಾಲಾಕ್ಷಿ ಆಶಾ ಕಾರ್ಯಕರ್ತೆ ಯಾಗಿದ್ದರು. ವಿಶಾಲಾಕ್ಷಿ ಕೂಡ ಮೃತಪಟ್ಟಿದ್ದಾರೆ. ನಾಗೇಶ್ ಮತ್ತು ವಿಶಾಲಕ್ಷಿ ದಂಪತಿ ಪುತ್ರ ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿದ್ದರು. ಹೊಸ ಟಿಟಿ ವಾಹನಕ್ಕೆ ಪೂಜೆ ಮಾಡಿಸಲು ಸೋಮವಾರ (ಜೂ. 24) ರಂದು ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಶಿವಮೊಗ್ಗದಿಂದ ಹೊರಟು, ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಸ್ಥಾನ ತಲುಪಿದ್ದಾರೆ. ಅಲ್ಲಿ ವಾಹನ ಪೂಜೆ ಮಾಡಿಸಿ, ಬಳಿಕ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದಾರೆ. ಅಲ್ಲಿಂದ ಬೆಳಗಾವಿ ಜಿಲ್ಲೆ ಸವದತ್ತಿಗೆ ಆಗಮಿಸಿ, ಇಲ್ಲಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಸರಣಿ ಅಪಘಾತ; 6 ಕಾರುಗಳು ಜಖಂ
ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅಂಶಿಕುಮಾರ್ ಮಾತನಾಡಿ, ಟಿಟಿ ವಾಹನದಲ್ಲಿದ್ದ ಒಟ್ಟು 15 ಜನರೂ ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಹಿಳೆಯರು, ಎರಡು ಪುಟ್ಟ ಕಂದಮ್ಮಗಳು, ಇಬ್ಬರು ಗಂಡು ಮಕ್ಕಳು, ಡ್ರೈವರ್ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರಾವಾನೆ ಮಾಡಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ. ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 am, Fri, 28 June 24