ಹಾವೇರಿ: ಅನ್ಯಕೋಮಿನ ಯುವಕರ ಗುಂಪಿನಿಂದ ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ. RSS ಪಥಸಂಚಲನದ ಮಾರ್ಗ ವೀಕ್ಷಣೆಗೆ ತೆರಳಿದ್ದಾಗ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪಟ್ಟಣದಲ್ಲಿ ನಡಿಯುತ್ತಿರುವ ಪ್ರಶಿಕ್ಷಾ ವರ್ಗಕ್ಕೆ ಕಾರ್ಯಕರ್ತ ಬಂದಿದ್ದ ಎನ್ನಲಾಗಿದೆ. ಘಟನೆ ವೇಳೆ ಓರ್ವ ಆರ್ಎಸ್ಎಸ್ ಕಾರ್ಯಕರ್ತನ ತಲೆಗೆ ಗಾಯವಾಗಿದ್ದು, ಮೂರು-ನಾಲ್ಕು ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ರಟ್ಟೀಹಳ್ಳಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತಾಗಿ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, 10 ಜನರನ್ನು ಬಂಧಿಸಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು. ನಿನ್ನೆ ರಾತ್ರಿ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿತ್ತು. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಟ್ಟೀಹಳ್ಳಿ ಪಟ್ಟಣದಲ್ಲಿ ಭದ್ರತೆ ನೀಡಲಾಗಿದೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಆರ್ಎಸ್ಎಸ್ಗೆ ನಿಂದನೆ
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಆರ್ಎಸ್ಎಸ್ಗೆ ನಿಂದಿಸಿದ ಕುರಿತ ವಿಡಿಯೋ ವೈರಲ್ ಆಗಿರುವಂತಹ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ಪೊಲೀಸರಿಂದ ವೈರಲ್ ವಿಡಿಯೋ ಪರಿಶೀಲನೆ ಮಾಡಿದ್ದು, ಕಳೆದ ಭಾನುವಾರ ನಡೆದಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿದೆ ಎನ್ನಲಾಗಿದೆ.
ರಸ್ತೆ ದಾಟುತ್ತಿದ್ದ ಬೈಕ್ಗೆ ಕಾರ್ ಡಿಕ್ಕಿ: ಬಾಲಕ ಸಾವು
ವಿಜಯಪುರ: ರಸ್ತೆ ದಾಟುತ್ತಿದ್ದ ಬೈಕ್ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಬಳಿ ನಡೆದಿದೆ. ರಿಯಾಜ್ (12) ಮೃತ ಬಾಲಕ. ಸ್ಥಳಕ್ಕೆ ಮನಗೂಳಿ ಠಾಣೆಯ ಪೊಲೀಸರ ಭೇಟಿ ಮಾಡಿ ಪರಿಶೀಲನೆ ಮಾಡಿದರು. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತಿ-ಪತ್ನಿ ಶವ ಪತ್ತೆ
ಧಾರವಾಡ: ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತಿ-ಪತ್ನಿ ಶವ ಪತ್ತೆಯಾಗಿದೆ. ಪತ್ನಿ ಶ್ರೀದೇವಿ ಕೊಂದು ಪತಿ ರಾಜು ರಾಮಾಪುರ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿಯ ಶೀಲ ಶಂಕಿಸಿ ಪತಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಪಕ್ಕದಲ್ಲೇ ಪತಿ ರಾಜು ರಾಮಾಪುರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಆಸೀಫ್, ಮುಸೀರ್, ಸಲ್ಮಾನ್, ಸಿರಾಜ್ ಬಂಧಿತರು. ಆರೋಪಿಗಳು, ಗಾಂಜಾ ಕೇಳಿದ್ದಕ್ಕೆ ರಾಡ್ನಿಂದ ಹೊಡೆದು ಡೊಮನಿಕ್ ಎಂಬ ಯುವಕನನ್ನ ಕೊಲೆ ಮಾಡಿದ್ದರು.
ಬ್ರೇಕ್ ಫೇಲಾಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಬಳಿ ಸೋಮಾಪುರ ಗ್ರಾಮದಿಂದ ತಲ್ಲೂರಿಗೆ ಹೊರಟ್ಟಿದ್ದ KSRTC ಬಸ್ ಬ್ರೇಕ್ ಫೇಲಾಗಿ ಕಬ್ಬಿನ ಗದ್ದೆಗೆ ನುಗ್ಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 30ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗೆ ಡಿಕ್ಕಿಯಾಗಿ ಬಸ್ ಗದ್ದೆಗೆ ನುಗ್ಗಿದೆ. ಬಸ್ ಚಾಲಕ ಸೇರಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:38 pm, Wed, 12 October 22