ಹಾವೇರಿ: ಆಸ್ಪತ್ರೆಯ ಆವರಣದಲ್ಲಿ ನಿಂತಲ್ಲಿಯೇ ನಿಂತು ಧೂಳಿನಿಂದ ಕೂಡಿರುವ ಅಂಬ್ಯುಲೆನ್ಸ್(Ambulance) ಸಿಬ್ಬಂದಿ ಮತ್ತು ವೈದ್ಯರಿಲ್ಲದೇ ಖಾಲಿಯಾಗಿರುವ ಆಸ್ಪತ್ರೆ. ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಜಾನುವಾರುಗಳು. ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ರೈತರ ಜಾನುವಾರುಗಳಿಗೆ ಚರ್ಮ ಗಂಟು ರೋಗ ಸೇರಿದಂತೆ ಹಲವು ರೀತಿಯ ಕಾಯಿಲೆಗಳು ಕಾಡುತ್ತಿವೆ. ಅನಾರೋಗ್ಯಕ್ಕೆ ತುತ್ತಾಗಿರುವ ಜಾನುವಾರುಗಳಿಗೆ ಇದ್ದಲ್ಲಿಗೆ ಹೋಗಿ ಚಿಕಿತ್ಸೆ ನೀಡುವುದಕ್ಕೆ ಎಂದು ಸರಕಾರ ಹೊಸದಾಗಿ ಅಂಬ್ಯುಲೆನ್ಸ್ ನೀಡಿ, ರೋಗಕ್ಕೆ ತುತ್ತಾದ ಜಾನುವಾರುಗಳಿಗೆ ಚಿಕಿತ್ಸೆ ನೀಡೋಕೆ ಬೇಕಾದ ಎಲ್ಲ ರೀತಿಯ ಸೌಕರ್ಯಗಳನ್ನು ಅಂಬ್ಯುಲೆನ್ಸ್ ನಲ್ಲಿ ಒದಗಿಸಲಾಗಿದೆ. ಆದರೆ ಅಂಬ್ಯುಲೆನ್ಸ್ ಬಂದಿದ್ದು ಬಿಟ್ಟರೆ ಎಲ್ಲಿಯೂ ಕೂಡ ರೋಗಗ್ರಸ್ತ ಜಾನುವಾರುಗಳಿಗೆ ಚಿಕಿತ್ಸೆ ನೀಡಿಲ್ಲ.
ಇನ್ನು ಇಲ್ಲಿಯ ಸ್ಥಳೀಯರು ಮಾತನಾಡಿ, ಅಂಬ್ಯುಲೆನ್ಸ್ಗೆ ಚಾಲಕ, ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ನಿಂತಲ್ಲಿಯೇ ನಿಂತು ಧೂಳು ತಿನ್ನುತ್ತಿದೆ. ಅಂಬ್ಯುಲೆನ್ಸ್ ಒಳಗಡೆ ಇರುವ ವಸ್ತುಗಳು ಸಹ ಉಪಯೋಗ ಮಾಡದೇ ಹಾಳಾಗಿದ್ದಾವೆ. ಅನಾರೋಗ್ಯಕ್ಕೆ ತುತ್ತಾದ ಜಾನುವಾರುಗಳು ಅನುಭವಿಸುತ್ತಿರುವ ಯಾತನೆ ಕಂಡು ರೈತರು ಚಿಕಿತ್ಸೆ ಕೊಡಿಸುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಪಶು ಇಲಾಖೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾದ ಆಸ್ಪತ್ರೆ, ಅಂಬ್ಯುಲೆನ್ಸ್, ಪರಿಕರಗಳು ಸೇರಿದಂತೆ ಅನೇಕ ಸೌಲಭ್ಯಗಳಿದ್ದರು. ಚಾಲಕ, ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ಸೌಲಭ್ಯಗಳು ಉಪಯೋಗಕ್ಕೆ ಬಾರದಂತಾಗಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಜಿಲ್ಲಾ ಕೇಂದ್ರದಲ್ಲಿರುವ ಪಶು ಆಸ್ಪತ್ರೆಯಲ್ಲಿಯೇ ಪ್ರಮುಖವಾಗಿ ವೈದ್ಯರು ಇಲ್ಲವಾಗಿದ್ದಾರೆ. ಪಶು ಇಲಾಖೆಯ ಜಿಲ್ಲಾ ಕೇಂದ್ರದ ಆಸ್ಪತ್ರೆ ಹಾಗೂ ಕಚೇರಿಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಪಶು ಆಸ್ಪತ್ರೆಯಲ್ಲಿ ಎಲ್ಲಾ ಇದ್ದರೂ ರೈತರ ಜಾನುವಾರುಗಳಿಗೆ ಉಪಯೋಗವಾಗದೇ ಇದ್ದು ಇಲ್ಲದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಅಗತ್ಯಕ್ಕೆ ತಕ್ಕಷ್ಟು ಇಲ್ಲದೆ ಇರುವುದರಿಂದ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸೀಗುತ್ತಿಲ್ಲ. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳು ಮೃತಪಟ್ಟಿದ್ದು, ಇನ್ನೂ ಹಲವು ಜಾನುವಾರುಗಳು ರೋಗಕ್ಕೆ ತುತ್ತಾಗಿ ಪರದಾಡುತ್ತಿವೆ ಎಂದಿದ್ದಾರೆ.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ ಕಳೆದ ಕೆಲವು ತಿಂಗಳುಗಳ ಹಿಂದೆ ಬಿಡದೆ ಸುರಿದ ಮಳೆ ಜಿಲ್ಲೆಯ ರೈತರ ಬದುಕನ್ನು ಸರ್ವನಾಶ ಮಾಡಿದೆ. ರೈತರು ಬೆಳೆದ ಬೆಳೆಗಳು ನೀರಲ್ಲಿ ನಿಂತು ಹಾಳಾಗಿ ಹೋಗಿವೆ. ಇದೀಗ ರೈತರ ಜಾನುವಾರುಗಳಿಗೂ ಚರ್ಮ ಗಂಟು ರೋಗ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಇದೆ. ಈಗಾಗಲೇ ಜಿಲ್ಲೆಯ ಪಶು ಇಲಾಖೆ ಅಧಿಕಾರಿಗಳು ಖಾಲಿ ಇರೋ ಹುದ್ದೆಗಳಿಗೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ದೊರಕಿಸಿಕೊಡುವಂತೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ರೈತರ ಜಾನುವಾರುಗಳಿಗೆ ಚರ್ಮ ಗಂಟು ರೋಗ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದ್ದರೆ, ಜಿಲ್ಲೆಯಲ್ಲಿನ ಪಶುಸಂಗೋಪನಾ ಇಲಾಖೆಯಲ್ಲಿ ಚಾಲಕ, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದರಿಂದ ರೈತರ ಜಾನುವಾರುಗಳ ಪಾಲಿಗೆ ಎಲ್ಲ ಇದ್ದರೂ ಏನೂ ಇಲ್ಲದಂಥಾ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಒದಗಿಸಬೇಕಾಗಿದೆ.
ವರದಿ: ಪ್ರಭುಗೌಡ.ಎನ್.ಪಾಟೀಲ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ