ಸಿದ್ದರಾಮಯ್ಯ ಒನ್, ಸಿದ್ದರಾಮಯ್ಯ ಟೂ ನಡುವೆ ವ್ಯತ್ಯಾಸವಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ
2013-18 ವರೆಗಿನ ಸಿದ್ದರಾಮಯ್ಯ ಒನ್ ಮತ್ತು 2023ರ ಸಿದ್ದರಾಮಯ್ಯ ಟೂ ನಡುವೆ ಬಹಳಷ್ಟು ವ್ಯತ್ಯಾಸ ಇದೆ. ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆದರೂ ಏನು ಮಾಡದ ಸ್ಥಿತಿಯಲ್ಲಿದ್ದಾರೆ. ಅದಕ್ಕಾಗಿ ಬರಗಾಲ ಘೋಷಣೆ ಆಗಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ.
ಹಾವೇರಿ, ಸೆಪ್ಟೆಂಬರ್ 9: 2013-18 ವರೆಗಿನ ಸಿದ್ದರಾಮಯ್ಯ ಒನ್ ಮತ್ತು 2023ರ ಸಿದ್ದರಾಮಯ್ಯ ಟೂ ನಡುವೆ ಬಹಳಷ್ಟು ವ್ಯತ್ಯಾಸ ಇದೆ. ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆದರೂ ಏನು ಮಾಡದ ಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲಾ ಕೋರ್ ಕಮಿಟಿ ಸಭೆ ಮುಕ್ತಾಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದಕ್ಕಾಗಿ ಬರಗಾಲ ಘೋಷಣೆ ಆಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನಾವು ಕೊಟ್ಟ ಅಕ್ಕಿಯನ್ನೂ ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ನಿಂತುಹೋಗಿದೆ. ಅಭಿವೃದ್ಧಿ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಸೆಪ್ಟೆಂಬರ್ ಬಂದರೂ ಬರ ಘೋಷಣೆ ಮಾಡಿಲ್ಲ. ಕುಡಿಯುವ ನೀರು, ಮೇವು ಸೇರಿದಂತೆ ಹಲವು ಸಮಸ್ಯೆ ಇವೆ. ಈ ಸರ್ಕಾರವನ್ನು ರೈತ ವಿರೋಧಿ ಅನ್ನದೇ ಇನ್ನೇನು ಎನ್ನಲು ಸಾಧ್ಯ. ಕಿಸಾನ್ ಸಮ್ಮಾನ್ ಯೋಜನೆಯ 4000 ರೂ ಕೊಡುವುದನ್ನು ನಿಲ್ಲಿಸಿದರು. ಬರೀ ಭಾಷಣದ ಮೂಲಕ ರೈತರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಆರೋಪಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು
ಮಹದಾಯಿ ವಿಚಾರದಲ್ಲಿ ಕೇಂದ್ರಕ್ಕೆ ಆಸಕ್ತಿ ಇಲ್ಲವೆಂದು ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಇದ್ದಾಗ ನ್ಯಾಯಾಧಿಕರ ರಚಿಸಿ ಅಂತಾ ಅಫಿಡವಿಟ್ ಕೊಟ್ಟರು. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ಏಕೆ ಮಾತನಾಡಲ್ಲ. ಮಹದಾಯಿ ಯೋಜನೆ ಆಗಬಾರದು ಅಂತಾ ಗೋಡೆ ಕಟ್ಟಿದ್ದರು. ನೀರು ಹೆಂಗೆ ಬರುತ್ತೆ, ಆಗ ಯಾಕೆ ಮಾತನಾಡಲಿಲ್ಲ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಸ್ವಾಗತಾರ್ಹ
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಸ್ವಾಗತಾರ್ಹ. ವರಿಷ್ಠರ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎಂಬ ಮಾಹಿತಿ ಇಲ್ಲ. ಸರ್ಕಾರದ ವಿರುದ್ಧ ಜಂಟಿ ಹೋರಾಟ ಮಾಡುವ ಭಾವನೆ ಇದೆ.
ಇದನ್ನೂ ಓದಿ: ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಮೈತ್ರಿ ಕುರಿತು ಜೆಡಿಎಸ್ನವರೂ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ವಿಪಕ್ಷ ನಾಯಕರ ಆಯ್ಕೆ ಏಕೆ ವಿಳಂಬ ಆಗುತ್ತಿದೆ ಅಂತಾ ಗೊತ್ತಿಲ್ಲ. ವಿಪಕ್ಷ ನಾಯಕರ, ರಾಜ್ಯಾಧ್ಯಕ್ಷರನ್ನು ಒಟ್ಟಿಗೆ ಆಯ್ಕೆ ಮಾಡಬಹುದು. ಈ ಕಾರಣಕ್ಕೆ ಸಮಯ ಹಿಡಿದಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಹಾವೇರಿಯಿಂದ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂತೇಶ್ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧರಿಸುತ್ತೆ. 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾನು ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಊಹಾಪೋಹವಷ್ಟೇ. ನಾನು ರಾಷ್ಟ್ರರಾಜಕಾರಣಕ್ಕೆ ಹೋಗುತ್ತೇನೆಂದು ಎಲ್ಲೂ ಹೇಳಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.