ಹಾವೇರಿ: ಶಿಗ್ಗಾಂವಿಯಲ್ಲಿ (Shiggaon) ನೂತನವಾಗಿ ನಿರ್ಮಾಣವಾಗಲಿರುವ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದ (Shivaji Maharaj Community Hall) ಕಟ್ಟಡ ಕಾಮಗಾರಿಗೆ (Foundation Stone) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸೇರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೂಮಿ ಪೂಜೆ ನೆರವೇರಿಸಿದರು.
ಮೂರು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನವು ಸಮಾಜದ ಹಾಗೂ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಭವಿಷ್ಯದಲ್ಲಿ ಅನುಕೂಲ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಗೋಸಾಯಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ, ಮಂಜುನಾಥ ಭಾರತಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಈ ಅಭಿವೃದ್ಧಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಹೇಶ್ ಜೋಶಿ, ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾರುತಿರಾವ್ ಮುಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಹುಬ್ಬಳ್ಳಿ : ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಈ ಬಾರಿ ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ ನಡೆಯುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದರು.
ಜನವರಿ 12 ರಿಂದ 15ರ ವರೆಗೆ ನಾಲ್ಕು ದಿನಗಳ ಕಾಲ ಯುವಜನ ಮಹೋತ್ಸವ ನಡೆಯಲಿದೆ. ಸ್ವಾಮಿ ವಿವೇಕಾನಂದರ 160 ನೇ ಜನ್ಮ ಜಯಂತಿ ಅಂಗವಾಗಿ ನಡೆಯಲಿರುವ ಯುವಜನ ಮಹೋತ್ಸವವನ್ನು ರಾಜ್ಯದಲ್ಲಿ ಉದ್ಘಾಟಿಸಲು ಜನವರಿ 12 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ಹಂಚಿಕೊಂಡರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಈ ಬಾರಿಯ 26ನೇ ರಾಷ್ಟ್ರೀಯ ಯುವ ಜನೋತ್ಸವ ದೊರಕಿದ್ದು ರಾಜ್ಯಕ್ಕೆ ಹೆಮ್ಮೆಯ ವಿಚಾರ. ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಯುವ ಜನರ ಈ ಹಬ್ಬದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಜನೋತ್ಸವದಲ್ಲಿ ಎಲ್ಲಾ ರಾಜ್ಯಗಳಿಂದ ಸುಮಾರು 7,500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರತಿನಿಧಿಗಳಿಗೆ ಸರಿಯಾದ ವಸತಿ ಮತ್ತು ವಸತಿ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಲು ಮತ್ತು ವೇದಿಕೆಗಳನ್ನು ಸಿದ್ಧಪಡಿಸಲು ಸೂಚನೆಗಳನ್ನು ನೀಡಲಾಗಿದೆ.
ಈ ಸುವರ್ಣಾವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಸ್ತ ಧಾರವಾಡ ಲೋಕಸಭಾ ಜನತೆಯ ಜನರ ಪರವಾಗಿ ಪ್ರಲ್ಹಾದ್ ಜೋಶಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಈ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಹುಬ್ಬಳ್ಳಿ-ಧಾರವಾಡ ಸನ್ನದ್ಧವಾಗಿ ದೇಶದ ಮೂಲೆ ಮೂಲೆಯಿಂದ ಆಗಮಿಸುವ ಎಲ್ಲ ಯುವಕರನ್ನು ಸ್ವಾಗತಿಸಲಿದೆ ಎಂದು ಪ್ರಲ್ಹಾದ ಜೋಶಿಯವರು ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ