86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ, ಲಾಂಛನದಲ್ಲಿ ಕೆಲವೊಂದು ಮಾರ್ಪಾಡು: ಡಾ. ಮಹೇಶ ಜೋಶಿ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 23, 2022 | 5:20 PM

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6,7 ಮತ್ತು 8 ರಂದು ಹಾವೇರಿಯಲ್ಲಿ ನಡೆಯಲಿದ್ದು, ನಗರದ ಆರ್​ಟಿಓ ಕಚೇರಿ ಬಳಿ ಇರುವ ಅಜ್ಜಯ್ಯನ ಗುಡಿ ಎದುರಿಗೆ ಸಮ್ಮೇಳನ ನಡೆಸಲು ಸ್ಥಳ ನಿಗದಿ ಮಾಡಲಾಗಿದೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ, ಲಾಂಛನದಲ್ಲಿ ಕೆಲವೊಂದು ಮಾರ್ಪಾಡು: ಡಾ. ಮಹೇಶ ಜೋಶಿ ಮಾಹಿತಿ
ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ
Follow us on

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆಯಲಿದೆ. ನಗರದ ಆರ್​ಟಿಓ ಕಚೇರಿ ಬಳಿ ಇರುವ ಅಜ್ಜಯ್ಯನ ಗುಡಿ ಎದುರಿಗೆ ಸಮ್ಮೇಳನ ನಡೆಸಲು ಸ್ಥಳ ನಿಗದಿ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ (Mahesh Joshi) ಹೇಳಿದರು. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಲಾಂಛನದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ಭಾವಚಿತ್ರಗಳ ಬದಲು ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳನ್ನು ಲಾಂಛನದಲ್ಲಿ ಹಾಕಲಾಗಿದೆ. ಹಾವೇರಿಯ ಅಸ್ಮಿತೆಯನ್ನು ತೋರಿಸುವುದನ್ನು ಲಾಂಛನದಲ್ಲಿ ಅಳವಡಿಸಲಾಗಿದೆ. ‘ಸಾಮರಸ್ಯದ ಭಾವ, ಕನ್ನಡದ ಜೀವ’ ಎಂದು ಘೋಷ ವಾಕ್ಯ ಕೂಡ ನೀಡಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 1ರಿಂದ ಕನ್ನಡ ರಥ ರಾಜ್ಯಾದ್ಯಂತ ಸಂಚಾರ

ಡಿಸೆಂಬರ್ 1ರಿಂದ ಕನ್ನಡ ರಥ ರಾಜ್ಯಾದ್ಯಂತ ಸಂಚಾರ ಮಾಡಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಿದ್ದಾಪುರದ ಭುವನೇಶ್ವರಿ ದೇವಸ್ಥಾನದಿಂದ ರಥ ಸಂಚಾರ ಆರಂಭಿಸಲಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಕನ್ನಡ ರಥ ಸಂಚರಿಸುತ್ತಿದೆ. ಭುವನೇಶ್ವರಿ ದೇವಸ್ಥಾನದಲ್ಲಿನ ದೀಪವನ್ನು ನಂದಾದೀಪದಂತೆ ಕನ್ನಡ ರಥದಲ್ಲಿಟ್ಟು ರಥಕ್ಕೆ ಚಾಲನೆ ನೀಡಲಾಗುವುದು. ಜನೇವರಿ 1ರಂದು ಕನ್ನಡ ರಥ ಹಾವೇರಿ ಜಿಲ್ಲೆಗೆ ಬರಲಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನಕದಾಸರು, ಶಿಶುವಿನಹಾಳ ಶರೀಫರು ಮತ್ತು ಸರ್ವಜ್ಞರ ಹೆಸರಿನಲ್ಲಿ ವೇದಿಕೆಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಆಡಳಿತದಲ್ಲಿ ಕನ್ನಡ ಅನ್ನೋದು ಕಾನೂನಾಗಬೇಕು

ವಿಶೇಷವಾಗಿ ದಿ. ಪುನೀತ್ ರಾಜಕುಮಾರರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ‘ನಾವಾಡುವ ನುಡಿಯೇ ಕನ್ನಡ ನುಡಿ’ ಕಾರ್ಯಕ್ರಮ ಮಾಡಲಾಗುತ್ತಿದೆ. ಇಡಿ ವಿಶ್ವದಲ್ಲಿರುವ ಕನ್ನಡ ಸಾಧಕರಿಗೆ 86 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮೈಸೂರು ದಸರಾದಷ್ಟು ವಿಜೃಂಭಣೆಯಿಂದ ಸಮ್ಮೇಳನ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಗಳ ಸ್ತಬ್ಧಚಿತ್ರಗಳು ಸಮ್ಮೇಳನದಲ್ಲಿ ಪ್ರದರ್ಶನ ಆಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಆಡಳಿತದಲ್ಲಿ ಕನ್ನಡ ಅನ್ನೋದು ಕಾನೂನಾಗಬೇಕು. ಚಳಿಗಾಲದ ಅಧಿವೇಶನದಲ್ಲಿ ಇದಾಗಲಿದೆ ಅನ್ನೋ ವಿಶ್ವಾಸವಿದೆ. ಸಮ್ಮೇಳನಕ್ಕೆ ಪ್ರತಿನಿಧಿಗಳ ನೋಂದಣಿಗೆ ಆ್ಯಪ್​ ಸಿದ್ದವಾಗಿದ್ದು, ಆ ಮೂಲಕವೇ ಪ್ರತಿನಿಧಿಗಳ ನೋಂದಣಿ ಆಗಬೇಕು ಎಂದು ಡಾ. ಮಹೇಶ ಜೋಶಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:18 pm, Wed, 23 November 22