
ಬೆಂಗಳೂರು, ನವೆಂಬರ್ 15: ಹಿರಿಯೂರು ಉಪ ಚುನಾವಣೆಯ ಘೋಷಣೆಗೂ ಮುನ್ನವೇ ರಾಜಕೀಯ ಬೆಳವಣಿಗೆಗಳು ಶುರುವಾಗಿವೆ. ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ನಡೆಸುತ್ತಿದ್ರೆ, ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ನಿರ್ಮಾಣವಾಗಿದೆ. ಒಂದೆಡೆ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿದ್ದರೆ, ಇನ್ನೊಂದೆಡೆ ಮಿತ್ರ ಪಕ್ಷ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಹೀಗಾಗಿ ಹಿರಿಯೂರು ಉಪಸಮರಕ್ಕೂ ಮುನ್ನ ದೋಸ್ತಿ ಮಧ್ಯೆ ಪೈಪೋಟಿ ಶುರುವಾಗಿದ್ದು, ಮಿತ್ರ ಪಕ್ಷಗಳ ನಾಯಕರು ಬಹಿರಂಗವಾಗಿಯೇ ಟಿಕೆಟ್ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸ್ವತಃ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಕೆಲ ಖಡಕ್ ಸಲಹೆಗಳನ್ನು ನೀಡಿದ್ದಾರೆ.
ಹಿರಿಯೂರು ಟಿಕೆಟ್ ಬಿಜೆಪಿಗೆ ನೀಡಬೇಕೆನ್ನುವ ವಿಪಕ್ಷ ನಾಯಕ ಆರ್ ಅಶೋಕ್ ಮಾತಿಗೆ ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಏನು ಪರಿಸ್ಥಿತಿ ಇದೆ ಎಂದು ಬಿಜೆಪಿ ನಾಯಕರು ಅರ್ಥೈಸಿಕೊಳ್ಳಬೇಕು. ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕುವ ಬಗ್ಗೆ ನನಗೆ ಪ್ರತಿಷ್ಠೆ ಇಲ್ಲ. ಆ ಚುನಾವಣೆ ಗೆದ್ದರೇ ರಾಜ್ಯದಲ್ಲಿ ಮುಂದಿನ ಭವಿಷ್ಯ ಇದೆ. ಜನ ಏನು ನಿರೀಕ್ಷೆ ಮಾಡುತ್ತಿದ್ದಾರೆ ಅದನ್ನು ಪ್ರೋತ್ಸಾಹ ಮಾಡಬೇಕು. ಇಲ್ಲಿ ಬಿಜೆಪಿ-ಜೆಡಿಎಸ್ನಿಂದ ನಿಲ್ಲಬೇಕು ಎಂಬುದು ಪ್ರಶ್ನೆ ಅಲ್ಲ. ಜನಾಭಿಪ್ರಾಯ ಸಂಗ್ರಹ ಮಾಡುವುದು ಎರಡು ಪಕ್ಷಗಳ ಜವಾಬ್ದಾರಿ. ನಾನು ಮಾತನಾಡಲು ತಯಾರಿದ್ದೇನೆ ಎಂದಿದ್ದಾರೆ.
ಹಿರಿಯೂರು ಟಿಕೆಟ್ ನಮ್ಮ ಪಕ್ಷಕ್ಕೆ ನೀಡಬೇಕು. ಟಿಕೆಟ್ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ಮಾತನಾಡುತ್ತೇವೆ. ಜೆಡಿಎಸ್ ಜೊತೆ ಕೇಂದ್ರ ನಾಯಕರು ಕೂಡ ಚರ್ಚೆ ಮಾಡ್ತಾರೆ. ಜೆಡಿಎಸ್ ಮನವೊಲಿಸಿ ನಮ್ಮ ಪಕ್ಷಕ್ಕೇ ಟಿಕೆಟ್ ಕೊಡುವ ವಿಶ್ವಾಸವಿದೆ. ಸದ್ಯ ನಾವು ಬಿಜೆಪಿಗೇ ಟಿಕೆಟ್ ನೀಡಬೇಕೆಂದು ನಿರ್ಧರಿಸಿದ್ದೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಡಿ ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ದಗೊಳ್ಳುತ್ತಿದೆ. ಚುನಾವಣಾ ಘೋಷಣೆಗೂ ಮುನ್ನವೇ ಟಿಕೆಟ್ ಹಾಗೂ ಇನ್ನಿತರ ವಿಚಾರಗಳ ಕುರಿತಾಗಿ ಚರ್ಚೆಗಳು ಶುರುವಾಗಿವೆ. ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಎನ್ಡಿಎ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾಯಕರಲ್ಲೇ ಗೊಂದಲವಾಗಿದೆ. ಈಗಾಗಲೇ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಜೆಡಿಎಸ್ ಸ್ಪರ್ಧೆ ಬಗ್ಗೆ ರಾಜ್ಯ ಬಿಜೆಪಿಗೆ ಸ್ಪಷ್ಟತೆ ಸಿಕ್ಕಿಲ್ಲ. ಹಿರಿಯೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಾ? ಅಥವಾ ಬಿಜೆಪಿಯೇ ಸ್ಪರ್ಧಿಸಬೇಕಾ ಎಂಬ ಚರ್ಚೆಗಳು ನಡೆದಿವೆ. ಹೀಗಾಗಿ ಎನ್ಡಿಎ ಅಭ್ಯರ್ಥಿ ಯಾರು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಡಿಕೆ ಶಿವಕುಮಾರ್ ಅವರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಮತ್ತೊಂದು ಕಡೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ ಅವರಿಗೂ ಇದು ಮಹತ್ವದ ಉಪ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಅನುಕಂಪದ ಮೇರೆಗೆ ಸುಧಾಕರ್ ಪುತ್ರ ಸುಹಾಸ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.