ರಾಮನಗರ, ಮಾರ್ಚ್ 18: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂಒತ್ತುವರಿ (Land Encroachment) ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಹೈಕೋರ್ಟ್ (Karnataka High Court) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಇದೀಗ ಕಂದಾಯ ಇಲಾಖೆ ಒತ್ತುವರಿ ತೆರೆವು ಕಾರ್ಯಾಚರಣೆಗೆ ಮುಂದಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕೆಲವು ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣ ಇದಾಗಿದೆ.
ಹೆಚ್ಡಿಕೆ ಕುಟುಂಬದ ವಿರುದ್ಧ ಕೇಳಿಬಂದಿರುವ ಭೂಒತ್ತುವರಿ ಆರೋಪ ಸಂಬಂಧ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ರಚನೆ ಮಾಡಿದ್ದರು. ಕೇತಗಾನಹಳ್ಳಿಯ ಸರ್ವೆ ನಂ.7, 8, 9, 10, 16, 17, 79ರಲ್ಲಿ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕಂದಾಯ ಇಲಾಖೆ, ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ. ಇದೀಗ ಸರ್ಕಾರಕ್ಕೆ ಸರ್ವೆ ವರದಿ ಸಲ್ಲಿಸಿ ಒತ್ತುವರಿ ತೆರವು ಮಾಡಲು ಇಲಾಖೆ ಮುಂದಾಗಿದೆ. ಇಂದು ಕಂದಾಯ ಇಲಾಖೆ ಅಧಿಕಾರಿಗಳಿಂದ ಒತ್ತುವರಿ ತೆರವು ಸಾಧ್ಯತೆ ಇದೆ. ಒತ್ತುವರಿ ತೆರವಿಗೆ ಕುಮಾರಸ್ವಾಮಿ ತೋಟದ ಮನೆಯ ಮುಂದೆ ಎರಡು ಜೆಸಿಬಿಗಳು ಸಿದ್ಧವಾಗಿವೆ.
ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಕುಟುಂಬದವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ವಿಚಾರವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿತ್ತು. ಇದಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣ ಸಂಬಂಧ ಹೈಕೋರ್ಟಿನಲ್ಲಿ ಸೋಮವಾರ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಕೆ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಸ್ಐಟಿ ರಚನೆ ಮಾಡಿದ್ದಾರೆ. ಹಾಗಾದರೆ ಕಂದಾಯ ಇಲಾಖೆ ಅಷ್ಟೊಂದು ಶಕ್ತಿಶಾಲಿಯಾಗಿದೆಯೇ? ರಾಜ್ಯ ಸರ್ಕಾರವು ಸಂವಿಧಾನಕ್ಕಿಂತ ಮಿಗಿಲಾಗಿದೆಯೇ? 14 ಎಕರೆ ಭೂ ಒತ್ತುವರಿ ತೆರವು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹಾಗಾದರೆ ಉಳಿದ 71 ಎಕರೆ ಭೂಮಿ ಒತ್ತುವರಿಯನ್ನು ತೆರವು ಮಾಡಬೇಕಾಗಿದೆ ಅಲ್ಲವೇ ಎಂದು ವಿಭಾಗಿಯ ಪೀಠ ಸರ್ಕಾರವನ್ನು ಪ್ರಶ್ನಿಸಿತು.
ಇದನ್ನೂ ಓದಿ: ಎಚ್ಡಿಕೆಗೆ ಪ್ರಾಸಿಕ್ಯೂಷನ್ ಸಂಕಷ್ಟ: ರಾಜ್ಯಪಾಲರ ನಿರ್ಧಾರದಲ್ಲಿ ಕುಮಾರಸ್ವಾಮಿ ಭವಿಷ್ಯ
ಇಷ್ಟೇ ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬ್ರೈನ್ ಮ್ಯಾಪಿಂಗ್ಗೆ ಒಳಪಡಿಸಲು ಆದೇಶಿಸಿದರೆ ಸತ್ಯ ಹೊರಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆ ಭೂ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿದೆ.