ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ. ರಾಮನಗರವನ್ನು ಅಭಿವೃದ್ಧಿ ಮಾಡುವ ಇಚ್ಛೆ ನಿಮಗಿದೆಯೇ ಬಿಎಸ್ವೈ ಅವರೇ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
ಬಜೆಟ್ನಲ್ಲಿ ಮೀಸಲಿಟ್ಟ ಹಣ ನೀಡಿ:
ನಾನು ನನ್ನ ಬಜೆಟ್ನಲ್ಲಿ ಜಿಲ್ಲೆಗೆ ಮೀಸಲಿಟ್ಟ ಹಣವನ್ನು ಪ್ರಾಮಾಣಿಕವಾಗಿ ಬಿಡುಗಡೆ ಮಾಡಿ. ಅದನ್ನೂ ಮೀರಿದ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ನಿಮಗೆ ನನ್ನ ಜನ ಸಹಕಾರ ಸದಾ ಇರಲಿದೆ. ಆದರೆ ಹೆಸರು ಬದಲಿಸಿ ಜಿಲ್ಲೆಯ ಸಂಸ್ಕೃತಿ, ಅಸ್ಮಿತೆಗೆ ಬೆಂಕಿ ಇಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯ ಹೆಸರಲ್ಲಿ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಇಲ್ಲಿಗೆ ಕೋಟಿ ಕುಳಗಳು ಬರುವುದು ಬೇಡ. ಭೂಮಿ ಲೂಟಿಯಾಗದೇ ಇರಲಿ. ಅಷ್ಟಕ್ಕೂ ಹೆಸರಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ:
ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ. ಇದನ್ನು ಮೀರಿ ಹೆಸರು ಬದಲಿಸಿದರೆ ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಹೆಸರಿಗೆ ಆಗುವ ಅಪಮಾನ. ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.