ರೇವಣ್ಣಗೆ ಜಾಮೀನು ಸಿಕ್ಕಿದ್ದಕ್ಕೆ ಸಂಭ್ರಮ ಬೇಡ, ನನಗೆ ಖುಷಿಯಾಗಿಲ್ಲ: ಹೆಚ್​ಡಿ ಕುಮಾಸ್ವಾಮಿ

|

Updated on: May 14, 2024 | 12:04 PM

ಸ್ವಂತ ಅಣ್ಣ ಹೆಚ್​ಡಿ​ ರೇವಣ್ಣಗೆ ಜಾಮೀನು ಸಿಕ್ಕಿದರೂ ಇದರಿಂದ ಖುಷಿಯಾಗಿಲ್ಲವೆಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ. ಇದು ಸಂಭ್ರಮ ಪಡುವ ಸಮಯವಲ್ಲ ಎಂದಿರುವ ಅವರು, ಎಸ್​​ಐಟಿಯ ತನಿಖಾ ಪ್ರಕ್ರಿಯೆಯ ರೀತಿಯ ಬಗ್ಗೆಯೂ ಕಿಡಿ ಕಾರಿದ್ದಾರೆ. ಕುಮಾರಸ್ವಾಮಿ ಅವರು ಏನೇನೆಂದರು ಎಂಬ ವಿವರಗಳಿಗೆ ಮುಂದೆ ಓದಿ.

ರೇವಣ್ಣಗೆ ಜಾಮೀನು ಸಿಕ್ಕಿದ್ದಕ್ಕೆ ಸಂಭ್ರಮ ಬೇಡ, ನನಗೆ ಖುಷಿಯಾಗಿಲ್ಲ: ಹೆಚ್​ಡಿ ಕುಮಾಸ್ವಾಮಿ
ಹೆಚ್​ಡಿ ಕುಮಾಸ್ವಾಮಿ
Follow us on

ಬೆಂಗಳೂರು, ಮೇ 14: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Video Case) ಪ್ರಕರಣ ಮತ್ತು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ (HD Revanna) ವಿರುದ್ಧದ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಕೊನೆಗೂ ರೇವಣ್ಣ ಕುಟುಂಬ ತುಸು ನಿರಾಳವಾಗುವಂತಾಗಿದೆ. ರೇವಣ್ಣಗೆ ಜಾಮೀನು ದೊರೆತಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಆದರೆ, ರೇವಣ್ಣಗೆ ಜಾಮೀನು ದೊರೆತಿರುವುದರಿಂದ ನನಗೆ ಖುಷಿಯಾಗಿಲ್ಲ. ಇದು ಸಂತಸಪಡುವ ಸಮಯವೂ ಅಲ್ಲ ಎಂದು ರೇವಣ್ಣರ ಸ್ವಂತ ತಮ್ಮನೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಬೇಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ಹೇಳಿದರು.

ನಿಮಗೆ ಜನ್ಮಕೊಟ್ಟ ತಂದೆ-ತಾಯಿ ಇದ್ದಾರೆ, ಒಡಹುಟ್ಟಿದವರಿದ್ದಾರೆ. ಪೆನ್​​ಡ್ರೈವ್​ ಹಂಚಿದವರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಎಸ್​ಐಟಿ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿದೆ ದೊಡ್ಡ ತಿಮಿಂಗಿಲ ಎಂದ ಕುಮಾರಸ್ವಾಮಿ!

ಎಸ್​ಐಟಿ ತನಿಖೆ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯಾ? ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಿಲ ಇದೆ. ಆ ತಿಮಿಂಗಲ ಯಾರೆಂದು ರಾಜ್ಯದ ಜನರಿಗೂ ಗೊತ್ತಿದೆ. ಏಪ್ರಿಲ್ 22ರಂದು ದಾಖಲಾದ ಎಫ್​ಐಆರ್​ಗೆ ಸಂಬಂಧಿಸಿ ಒಬ್ಬರನ್ನೂ ಬಂಧಿಸಿಲ್ಲ. ನವೀನ್​ ಗೌಡ ನಮ್ಮ ಪಕ್ಷದವರಿಗೆ ಕೊಟ್ಟೆ ಅಂದಿದ್ದಾನೆ. ನಮ್ಮ ಪಕ್ಷದವರಿಗೆ ಪೆನ್​ಡ್ರೈವ್​ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಪಹರಣ ಪ್ರಕರಣ: ಎಚ್​ಡಿ ರೇವಣ್ಣಗೆ ಜಾಮೀನು ಮಂಜೂರು, ಷರತ್ತುಗಳೇನು?

ನಾನು ಈಗಲೇ ಈ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ. ಈಗಲೇ ನಾನು ಏನೂ ಹೇಳಲ್ಲ ಎಂದು ಅವರು ಹೇಳಿದರು.

ಇನ್ನೂ ಸಮಯವಿದೆ, ಹೋರಾಡುವೆ: ಕುಮಾರಸ್ವಾಮಿ

ರೇವಣ್ಣ ಕುಟುಂಬ ಮುಗಿಸಲು ಪ್ಲ್ಯಾನ್​ ಮಾಡ್ತಿದ್ದೇನಂತೆ. ಹಲವರು ಈ ಬಗ್ಗೆ ಮಾತನಾಡಿಕೊಳ್ತಿದ್ದಾರೆ. ನಾನು ನ್ಯಾಯದ ಪರವಾಗಿ ಇದ್ದೇನೆ. ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗಬಾರದು. ಯಾವುದೇ ಮುಲಾಜಿಗೆ ಒಳಗಾಗದೇ ತನಿಖೆ ಆಗಬೇಕು. ಮಹಿಳಾ ಸಂತ್ರಸ್ತೆಯರ ಪರ ಹೋರಾಟ ಮಾಡುತ್ತೇನೆ. ಪೆನ್​​ಡ್ರೈವ್ ಪ್ರಕರಣ ದೊಡ್ಡಮಟ್ಟದಲ್ಲಿ ನಡೆದಿದೆ. ಇನ್ನೂ ಸಮಯ ಇದೆ, ನಾನು ದುಡುಕಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Tue, 14 May 24