ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತೌಕ್ತೆ ಚಂಡಮಾರುತದ ಪರಿಣಾಮದಿಂದ ರಾಜ್ಯ ಹಲವು ಕಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಇಂದು (ಮೇ 15) ಮತ್ತು ನಾಳೆ (ಮೇ 16) ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಶಿವಮೊಗ್ಗ ನಗರದ ಸುತ್ತಮುತ್ತ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದ ಮೊಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲೂ ಚಂಡಮಾರುತದ ಎಫೆಕ್ಟ್ನಿಂದ ತುಂತುರು ಮಳೆಯಾಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಹಲವೆಡೆ ಜಿಟಿಜಿಟಿ ಮಳೆಯಾಗುತ್ತಿದೆ. ಇಲ್ಲೂ ಕೂಡಾ 2 ದಿನ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮಲೆನಾಡು ಭಾಗದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ತೀವ್ರ ಗಾಳಿ, ಚಳಿ ಜೊತೆ ಸಾಧಾರಣ ಮಳೆಯಾಗುತ್ತಿರುವ ಕಾರಣ ಕೊಡಗಿನ ಜನರು ಬೀದಿಗೆ ಇಳಿಯದೆ ಮನೆಯಲ್ಲೇ ಕುಳಿತಿದ್ದಾರೆ. ಇಂದು ಜಿಲ್ಲೆಯಾದ್ಯಂತ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಹಾಲು ಪೇಪರ್ ಲಭ್ಯವಾಗಿದ್ದು, ಎಲ್ಲಾ ಸೇವೆಗಳು ಬಂದ್ ಆಗಿವೆ. ಮಂಡ್ಯದಲ್ಲೂ ಕೂಡಾ ಜಿಟಿಜಿಟಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
ಹಾಸನದಲ್ಲಿ ಮಳೆಯ ನಡುವೆಯೂ ವಾಹನ ಸಂಚಾರ ಕಡಿಮೆಯಾಗಿಲ್ಲ. ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಪೋಟವಾದರೂ ಜನ ಮಾತ್ರ ನಿರ್ಲಕ್ಷ್ಯದಿಂದ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಓಡಾಡುತ್ತಿದ್ದಾರೆ.
Published On - 10:42 am, Sat, 15 May 21