ಉತ್ತರ ಕನ್ನಡ: ರಾಜ್ಯದಲ್ಲಿ ಹಲವೆಡೆ ಮಳೆ (Rain) ಆರ್ಭಟ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಉತ್ತರ ಕನ್ನಡದಲ್ಲಿ ಮಹಾ ಮಳೆಗೆ ಮನೆ ಗೋಡೆ (Wall) ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಸಂಭವಿಸಿದೆ. ಇಂದು (ಜುಲೈ 12) ಬೆಳಗಿನ ಜಾವ ಭಾರೀ ಮಳೆಗೆ ಮನೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ. ರುಕ್ಮಿಣಿ ವಿಠ್ಠಲ್ ಮಾಚಕ (37), ಶ್ರೀದೇವಿ ವಿಠ್ಠಲ್ ಮಾಚಕ (13) ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಹಾಗೂ ತಾ.ಪಂ ಇಓ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಮನೆಯ ಮೇಲ್ಚಾವಣಿಗಳು ಕುಸಿದಿವೆ. ರಟ್ಟೀಹಳ್ಳಿ ತಾಲೂಕಿನ ಚಿಕ್ಕಕಬ್ಬಾರ, ಹಿರೇಕಬ್ಬಾರ, ಅಣಜಿ ಗ್ರಾಮ, ಗುಡ್ಡದಮಾದಾಪುರಲ್ಲಿ ಮನೆಯ ಮೇಲ್ಚಾವಣಿ, ಗೋಡೆ ಕುಸಿದಿವೆ. ಘಟನಾ ಸ್ಥಳಗಳಿಗೆ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಬೆಂಬಲಿಗರ ಬದಲಾವಣೆ ಕಸರತ್ತು: ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಾಪಸ್
ಚಿಕ್ಕಮಗಳೂರಿನ ಬಸ್ ನಿಲ್ದಾಣದ ಕಾಂಪೌಂಡ್ ಬಿದ್ದು ಎರಡು ಕಾರುಗಳು ಜಖಂ ಆಗಿರುವ ಘಟನೆ ನಡೆದಿದೆ. ಇನ್ನು ದಕ್ಷಿಣ ಕನ್ನಡದ ಪುತ್ತೂರಿನ ಹೆಬ್ಬಾರಬೈಲ್ನಲ್ಲಿ ಭೂಕುಸಿತವಾಗಿದೆ. ಭೂಕುಸಿತದಿಂದ ಎರಡು ಮನೆಗಳು ಅಪಾಯದ ಅಂಚಿನಲ್ಲಿವೆ. ಷರೀಫ್ ಮತ್ತು ಜಾರ್ಜ್ ಎಂಬುವರ ಮನೆಗಳು ಕುಸಿಯುವ ಭೀತಿ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಮನೆ ಮಾಲೀಕ ಜಾರ್ಜ್, ಮನೆಯನ್ನು 10 ವರ್ಷದ ಹಿಂದೆ ಕಟ್ಟಿಸಿದ್ದೇವೆ. 2018 ರಿಂದ ಸುರಿತಿರುವ ಮಳೆಗೆ ಮಣ್ಣು ಕುಸಿದಿದೆ. ಇವತ್ತು ನೋಡಿದಾಗ ಒಂದು ಪಿಲ್ಲರ್ ಕುಸಿದಿದೆ. ವಾರ್ಡ್ ಸದಸ್ಯರಿಗೆ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದೇವೆ. ಇವತ್ತು ಬೆಳಗ್ಗೆಯೇ ಇಂಜಿನಿಯರ್ ಬಂದಿದ್ದರು. ಮನೆ ಹಿಂದೆ ಹೋಗಬೇಡಿ ಎಂದಿದ್ದಾರೆ ಎಂದು ತಿಳಿಸಿದರು.
ನಾಯಿ ರಕ್ಷಿಸಿದ ಯುವಕ:
ಕೊಡಗು ಅಟ್ಟಿಹೊಳೆ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಮುಕ್ಕೋಡ್ಲು-ಹೆಮ್ಮತ್ತಾಳು ಸಂಪರ್ಕ ಕಡಿತವಾಗಿದೆ. ಗ್ರಾಮಕ್ಕೆ ಸಂಪರ್ಕವಿಲ್ಲದೇ 30 ಕುಟುಂಬಗಳು ಪರದಾಡುವಂತಾಗಿವೆ. ಇನ್ನು ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ಯುವಕರು ರಕ್ಷಿಸಿದ್ದಾರೆ. ತೋಟದಿಂದ ರಸ್ತೆ ದಾಟಲಾಗದೆ ನಾಯಿ ಪರದಾಡುತ್ತಿತ್ತು. ನಾಯಿ ರಕ್ಷಿಸುವ ಯತ್ನದಲ್ಲಿ ಯುವಕ ನೀರಿಗೆ ಬಿದ್ದಿದ್ದ. ಕೊನೆಗೂ ನಾಯಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ್ದಾನೆ. ಈ ಘಟನೆ ಮಡಿಕೇರಿ ತಾಲೂಕಿನ ಗಾಳಿಬೀಡು ಸಮೀಪ ಕೂಟುಪೊಳೆ ಬಳಿ ನಡೆದಿದೆ.
ಇದನ್ನೂ ಓದಿ: ‘ನನಗೆ ಟೆನಿಸ್ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ’; ನಿವೃತ್ತಿಯ ಮುನ್ಸೂಚನೆ ನೀಡಿದ ಟೆನಿಸ್ ಸ್ಟಾರ್ ರೋಜರ್ ಫೆಡರರ್!
ವೃದ್ಧನಿಗೆ ಚಿಕಿತ್ಸೆ ಕೊಡಿಸಲಾಗದ ಸ್ಥಿತಿಯಲ್ಲಿ ಕುಟುಂಬ:
ರಾಯಚೂರು ಲಿಂಗಸುಗೂರು ತಾಲೂಕಿನ ಕರಕಲಗಡ್ಡಿ ನಡುಗಡ್ಡೆಯಲ್ಲಿ ನೆರೆ ಭೀತಿ ಶುರುವಾಗಿದ್ದು, ವೃದ್ಧನಿಗೆ ನದಿ ದಾಟಿಸಿ ಚಿಕಿತ್ಸೆ ಕೊಡಿಸಲಾಗದೆ ಸ್ಥಿತಿಯಲ್ಲಿ ಕುಟುಂಬ ಇದೆ. ಕೈಯಲ್ಲಿ ಜೀವ ಹಿಡಿದು ಕುಟುಂಬಸ್ಥರು ನದಿ ದಾಟುತ್ತಿದ್ದಾರೆ.
Published On - 8:22 am, Tue, 12 July 22