ನೆದರ್ಲ್ಯಾಂಡ್ಸ್ನಲ್ಲಿ ವರ್ಕ್-ಫ್ರಮ್-ಹೋಮ್ ನೌಕರರ ಕಾನೂನಾತ್ಮಕ ಹಕ್ಕಾಗಿ ಮಾರ್ಪಡುವ ದಿನ ದೂರವಿಲ್ಲ!
ಹಾಲೆಂಡ್ನಲ್ಲಿ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗಳಿಗೆ ವಾಪಸ್ಸು ಕರೆಸಿ ಕೆಲಸ ಮಾಡಿಸುತ್ತಿವೆಯಾದರೂ ಸೆಲ್ಸ್ಫೋರ್ಸ್ನಂಥ ಕೆಲ ಕಂಪನಿಗಳು ಅವರನ್ನು ಕಚೇರಿಗೆ ವಾಪಸ್ಸು ಕರೆಸುವ ಯೋಚನೆಯನ್ನೇ ಕೈಬಿಟ್ಟು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ.
ನೆದರ್ಲ್ಯಾಂಡ್ಸ್ನಲ್ಲಿ ಮನೆಯಿಂದ ಕೆಲಸ ಮಾಡುವುದು ಒಂದು ಕಾನೂನಾತ್ಮಕ ಹಕ್ಕಾಗಿ ಮಾರ್ಪಡಲು ಒಂದು ಹಂತ ಮಾತ್ರ ಬಾಕಿಯಿದೆ. ಕಳೆದ ಡಚ್ ಸಂಸತ್ತಿನ (Dutch Parliament) ಕೆಳಮನೆ ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು (legislation) ಪಾಸು ಮಾಡಿದ್ದು ಮೇಲ್ಮನೆಯ ಅನುಮೋದನೆಯೊಂದು (approval) ಬಾಕಿಯಿದೆ. ಮಸೂದೆಗೆ ಸೆನೇಟ್ ಅನುಮೋದನೆ ನೀಡಿತು ಅಂತಾದರೆ, ಕಂಪನಿಗಳ ಮಾಲೀಕರು, ತಮ್ಮ ನೌಕರರು ಮನೆಯಿಂದಲೇ ಕೆಲಸ ಮಾಡುತ್ತೇನೆ ಅಂತ ಕೇಳಿದರೆ ಅವರ ಮನವಿಯನ್ನು ನಿರಾಕರಿಸುವಂತಿಲ್ಲ.
ಪ್ರಸ್ತುತವಾಗಿ ನೆದರ್ಲ್ಯಾಂಡ್ಸ್ನ ಸಂಸ್ಥೆಗಳು, ಮನೆಯಿಂದ ಕೆಲಸ ಮಾಡುವ ತಮ್ಮ ನೌಕರನ ಬೇಡಿಕೆಯನ್ನು ಯಾವುದೇ ಕಾರಣ ಸೂಚಿಸದೆ ತಿರಸ್ಕರಿಸಬಹುದಾಗಿದೆ. ಆದರೆ ಹೊಸ ಕಾನೂನು ಜಾರಿಗೆ ಬಂದರೆ, ಸಂಸ್ಥೆಗಳು ಮನೆಯಿಂದ ಕೆಲಸ ಮಾಡುವ ಬೇಡಿಕೆಯನ್ನು ತಿರಸ್ಕರಿಸುವಂತಿಲ್ಲ. ಒಂದು ಪಕ್ಷ ತಿರಸ್ಕರಿಸಲೇಬೇಕಾದರೆ ಅದಕ್ಕೆ ಸೂಕ್ತವೆನಿಸುವ ಹಲವಾರು ಕಾರಣಗಳನ್ನು ನೀಡಬೇಕಾಗುತ್ತದೆ.
ಹೊಸ ಕಾನೂನು ಜಾರಿಗೆ ಬಂದರೆ ಕೆಲಸ ಮತ್ತು ಖಾಸಗಿ ಬದುಕಿನ ನಡುವೆ ಉತ್ತಮ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಪ್ರಯಾಣದ ಸಮಯವನ್ನು ಉಳಿಸಿದಂತಾಗುತ್ತದೆ ಅಂತ ಗ್ರೋಯೆನ್ಲಿಂಕ್ಸ್ ಪಾರ್ಟಿಯ ಸೆನ್ನಾ ಮಾಟೌಗ್ ಹೇಳಿರುವರೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಹೊಸ ಕಾನೂನು ರಚಿಸಿದ ತಂಡದ ಸದಸ್ಯರ ಪೈಕಿ ಮಾಟೌಗ್ ಒಬ್ಬರಾಗಿದ್ದಾರೆ.
ಹೊಸ ಮಸೂದೆಯು 2015 ರ ನೆದರ್‌ಲ್ಯಾಂಡ್‌ನ ಫ್ಲೆಕ್ಸಿಬಲ್ ವರ್ಕಿಂಗ್ ಆಕ್ಟ್‌ಗೆ ತಿದ್ದುಪಡಿಯಾಗಿದೆ, ಈ ಮಸೂದೆ ಅಡಿಯಲ್ಲಿ ಕಾರ್ಮಿಕರು ತಮ್ಮ ಕೆಲಸದ ಸಮಯ, ವೇಳಾಪಟ್ಟಿ ಮತ್ತು ಕೆಲಸದ ಸ್ಥಳದಲ್ಲಿ ಬದಲಾವಣೆಗಳನ್ನು ಕೋರಬಹುದಾಗಿದೆ. ಕೆಲಸಗಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ನೆದರ್ಲ್ಯಾಂಡ್ಸ್ ಈಗಾಗಲೇ ಉತ್ತಮ ಕೀರ್ತಿಯನ್ನು ಹೊಂದಿದೆ.
ಕಂಪನಿಗಳು ತಮ್ಮ ನೌಕರರನ್ನು ಪುನಃ ಆಫೀಸುಗಳಿಗೆ ಬಂದು ಕೆಲಸ ಮಾಡುವಂತೆ ಮನವೊಲಿಸಲು ಹೆಣಗುತ್ತಿರುವಾಗಲೇ ಯುರೋಪಿನ್ ರಾಷ್ಟ್ರ ಹೊಸ ಕಾನೂನನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ.
ಹಾಲೆಂಡ್ನಲ್ಲಿ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗಳಿಗೆ ವಾಪಸ್ಸು ಕರೆಸಿ ಕೆಲಸ ಮಾಡಿಸುತ್ತಿವೆಯಾದರೂ ಸೆಲ್ಸ್ಫೋರ್ಸ್ನಂಥ ಕೆಲ ಕಂಪನಿಗಳು ಅವರನ್ನು ಕಚೇರಿಗೆ ವಾಪಸ್ಸು ಕರೆಸುವ ಯೋಚನೆಯನ್ನೇ ಕೈಬಿಟ್ಟು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ.
ಟೆಸ್ಲಾದಂಥ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳು ಕಚೇರಿಗೆ ಬರಲೇಬೇಕು ಅಂತ ತಾಕೀತು ಮಾಡುತ್ತಿವೆ. ಒಂದೋ ಕಚೇರಿಗೆ ಬಂದು ಕೆಲಸ ಮಾಡಬೇಕು ಇಲ್ಲವೇ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಕಂಪನಿಯನ್ನು ಬಿಟ್ಟು ಹೋಗಬೇಕೆಂದು ಟೆಸ್ಲಾದ ಸಿಈಒ ಎಲಾನ್ ಮಸ್ಕ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಹೊಸ ಕಾನೂನು ಡಚ್ ಕಂಪನಿಗಳಿಗೆ ಪ್ರತಿಕೂಲವಾಗಿ ಪರಿಣಮಿಸುವಂಥ ಸಾಧ್ಯತೆಯೇನೂ ಇಲ್ಲ. ಕೊವಿಡ್-19 ಪಿಡುಗಿನಿಂದಾಗಿ ಕಂಪನಿಗಳ ಶೇಕಡ 14ರಷ್ಟು ನೌಕರರು ಈಗಲೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಯುರೋಸ್ಟ್ಯಾಟ್ ಸಮೀಕ್ಷೆಯೊಂದರ ಪ್ರಕಾರ ಕಣಿವೆ ಭಾಗಗಳಲ್ಲಿ ವಾಸ ಮಾಡುವ ಜನ ಮನೆಯಿಂದ ಕೆಲಸ ಮಾಡುವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.
ಆದರೆ ಕೋವಿಡ್ ಪಿಡುಗಿನಿಂದಾಗಿ 2020 ರಲ್ಲಿ ಶುರುವಾದ ವರ್ಕ ಫ್ರಮ್ ಹೋಮ್ ಪದ್ಧತಿ ಗಮನಾರ್ಹ ಯಶ ಕಂಡಿರುವುದರಿಂದ ಕಾನೂನು ಮತ್ತು ಶಾಸನದ ನಡುವೆ ಸಮನ್ವಯತೆ ಸೃಷ್ಟಿಯಾಗಬೇಕಿದೆ.
ಇದನ್ನೂ ಓದಿ: Shocking News: ಪುರುಷನಿಗೂ ಪಿರಿಯಡ್ಸ್!; ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದವನಿಗೆ ಶಾಕ್