ಬೆಂಗಳೂರು: ರಾಜ್ಯ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಕಳೆದ ಕೆಲವು ಹೊತ್ತಿನಿಂದ ಧಾರಾಕಾರ ಮಳೆಯಾಗುತ್ತಿದೆ. ತೌತೆ ಚಂಡಮಾರುತ ಪರಿಣಾಮ ರಾಜ್ಯದ ಕರಾವಳಿ, ಮಲೆನಾಡು ಮುಂತಾದ ಭಾಗಗಳಿಗೆ ತಟ್ಟಿದ್ದು, ಇದೀಗ ಬೆಂಗಳೂರಿನಲ್ಲಿ ಕೂಡ ಜೋರು ಮಳೆಯಾಗಿದೆ. ನಗರದ ಕೋರಮಂಗಲ, ಕಾರ್ಪೊರೇಷನ್, ಎಚ್ಎಎಲ್, ಸಿಲ್ಕ್ ಬೋರ್ಡ್ ಪ್ರದೇಶಗಳಲ್ಲಿ ಕೆಲಹೊತ್ತಿನಿಂದ ಉತ್ತಮ ಮಳೆಯಾಗಿದೆ. ಇಂದಿರಾನಗರ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗದಲ್ಲಿ ಹವಾಮಾನ ಹೀಗಿದೆ
ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಸದ್ಯ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸೂಚನೆ ಕಂಡುಬಂದಿದೆ. ತೌಕ್ತೆ ಚಂಡಮಾರುತ ಪರಿಣಾಮ ಎರಡು-ಮೂರು ದಿನಗಳಿಂದ ಭಾರೀ ಮಳೆಯಾಗಿತ್ತು. ಸಮುದ್ರದ ಸಮೀಪ ಅಪಾರ ಹಾನಿಯೂ ಸಂಭವಿಸಿತ್ತು. ಇದೀಗ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ.
ಮಲೆನಾಡು ಭಾಗದಲ್ಲಿ ಮೋಡಕವಿದ ವಾತಾವರಣ
ಶಿವಮೊಗ್ಗದ ಹಲವೆಡೆ ಗಾಳಿ ಹಾಗೂ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸೂಚನೆ ಲಭ್ಯವಾಗಿದೆ. ಉತ್ತರ ಕನ್ನಡದ ಯಲ್ಲಾಪುರ, ಅಂಕೋಲಾ ಭಾಗದಲ್ಲಿ ಅರ್ಧ ತಾಸಿಗೊಮ್ಮೆ ಮಳೆಯಾಗುತ್ತಿದ್ದು, ದಟ್ಟವಾದ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಬೆಂಗಳೂರಿನಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಲೆನಾಡು ಭಾಗದಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಳೆದೆರೆಡು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದ್ದು, ಇಂದು ಕೂಡಾ ಮಳೆ ಮುಂದುವರೆದಿದೆ. ಇನ್ನೇನು ಮೇ ತಿಂಗಳ ಅಂತ್ಯಕ್ಕೆ ಮುಂಗಾರು ನೆರೆಯ ಕೇರಳ ರಾಜ್ಯವನ್ನು ಪ್ರವೇಶಿಸಲಿದ್ದು, ಅದಾಗಿ 2-3 ದಿನಗಳಲ್ಲಿ ಕರ್ನಾಟಕಕ್ಕೆ ಬರುವ ಸಾಧ್ಯತೆ ಇರುವುದರಿಂದ ಈ ಬಾರಿಯ ಬೇಸಿಗೆಯ ತಾಪಕ್ಕೆ ಕಡಿವಾಣ ಬಿದ್ದಂತಾಗಿದೆ.
Published On - 5:22 pm, Tue, 18 May 21