Cyclone Tauktae relief fund: ತೌಕ್ತೆ ಚಂಡಮಾರುತದಿಂದ ಮನೆ ಕುಸಿದರೆ 5 ಲಕ್ಷ, ಬೋಟ್ ದುರಂತದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
Karnataka Cyclone Tauktae relief fund: ಚಂಡಮಾರುತದಿಂದ ತೊಂದರೆಗೊಳಗಾದ 182 ಕುಟುಂಬಗಳಿಗೆ ತಲಾ 10,000 ರೂಪಾಯಿ ಪರಿಹಾರ ಮನೆಗಳಿಗೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳೂರು: ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದಿಂದ ಸಂಭವಿಸಿದ ಹಾನಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಚಂಡಮಾರುತದಿಂದ ಮನೆ ಸಂಪೂರ್ಣ ಕುಸಿದು ಬಿದ್ದಿದ್ದರೆ 5 ಲಕ್ಷ ಪರಿಹಾರ, ಭಾಗಶಃ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ, ಅರಬ್ಬಿ ಸಮುದ್ರದ ಟಗ್ ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಒದಗಿಸುವುದಾಗಿ ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ. ಜತೆಗೆ ಚಂಡಮಾರುತದಿಂದ ತೊಂದರೆಗೊಳಗಾದ 182 ಕುಟುಂಬಗಳಿಗೆ ತಲಾ 10,000 ರೂಪಾಯಿ ಪರಿಹಾರ ಮನೆಗಳಿಗೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದಿಂದ ರಾಜ್ಯದಲ್ಲಿ ಈವರೆಗೆ 6 ಜನ ಮೃತಪಟ್ಟಿದ್ದಾರೆ. 22 ತಾಲೂಕುಗಳಲ್ಲಿ 57 ಗುಡಿಸಲು, 333 ಮನೆಗಳಿಗೆ ಹಾನಿಯಾಗಿದೆ. 30 ಹೆಕ್ಟೇರ್ ಕೃಷಿ ಬೆಳೆ, 2.87 ಹೆಕ್ಟೇರ್ ತೋಟಗಾರಿಕಾ ಬೆಳೆ, 57 ಕಿ.ಮೀ ರಸ್ತೆಗೆ ಹಾನಿ ಉಂಟಾಗಿದೆ. 644 ವಿದ್ಯುತ್ ಕಂಬ, 147 ಟ್ರಾನ್ಸ್ಫಾರ್ಮಾರ್, 104 ಬೋಟ್ಗಳಿಗೆ ತೌಕ್ತೆಯ ಅಬ್ಬರದಿಂದ ಹಾನಿಗೊಳಗಾಗಿವೆ ಎಂದು ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ ಸರ್ಕಾಕ್ಕೆ ವರದಿ ಸಲ್ಲಿಸಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿಯ ವರದಿ ಸಲ್ಲಿಸಿದ ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ, ಚಂಡಮಾರುತದಿಂದ ಹಾನಿಗೊಳಗಾದ 547 ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 13 ನೆರೆ ಪರಿಹಾರ ಕೇಂದ್ರಗಳಲ್ಲಿ 290 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ತಿಳಿಸಿದೆ.
ತೌಕ್ತೆ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾನಿ ಪರಿಶೀಲನೆಗೆ ಮಂಗಳೂರಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದರು. ಜತೆಗೆ ಅವರು ಎನ್ಎಂಪಿಟಿ ಕಚೇರಿಯಲ್ಲಿ ಸಮುದ್ರದಲ್ಲಿ ಸಿಕ್ಕಿಬಿದ್ದಿದ್ದ ರಕ್ಷಣೆಯಾದ ಕಾರ್ಮಿಕರ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು. ಸಂಜೆಯ ವೇಳೆಗೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
(Cyclone Tauktae relief fund announced by Karnataka State government Rs 5 lakh for home collapse 10 lakh for Mangaluru boat died family)
Published On - 4:57 pm, Mon, 17 May 21