ಫಾಲ್ಸ್ ಆಯ್ತು ಮಾನ್ಯತಾ ಟೆಕ್ ಪಾರ್ಕ್: ವೈರಲ್ ವಿಡಿಯೋ ಬಿಚ್ಚಿಡ್ತು ಸಿಲಿಕಾನ್ ಸಿಟಿಯ ಕರ್ಮಕಾಂಡ

|

Updated on: Oct 16, 2024 | 10:39 AM

ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿದೆ. ಅದರಲ್ಲೂ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್​ ಪಾರ್ಕ್​​ ಜಲಾವೃತಗೊಂಡಿದೆ. ಧಾರಾಕಾರ ಮಳೆಗೆ ಮಾನ್ಯತಾ ಟೆಕ್​ ಫಾಲ್ಸ್ ನಿರ್ಮಾಣವಾಗಿದೆ. ಆ ಮೂಲಕ ಬ್ರ್ಯಾಂಡ್ ಬೆಂಗಳೂರಿನ ಕರ್ಮಕಾಂಡ ಬಯಲಾಗಿದೆ.

ಬೆಂಗಳೂರು, ಅಕ್ಟೋಬರ್​ 16: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಕಳೆದ ಎರಡು ದಿನಗಳಿಂದ ಶುರುವಾಗಿದ್ದ ಮಳೆ (rain) ಇಂದಿನವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿಯುತ್ತಿದೆ. ಭಾರೀ ಮಳೆಗೆ ನಗರದಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಆರ್ಭಟ್ಟಕ್ಕೆ ಐಟಿ-ಬಿಟಿ ಕಂಪನಿಗಳು ತತ್ತರಿಸಿದ್ದು, ಅದರಲ್ಲೂ ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್​ ಪಾರ್ಕ್​​ ಜಲಾವೃತಗೊಂಡಿದೆ. ಇದು ಮಾನ್ಯತಾ ಟೆಕ್​ ಪಾರ್ಕ್ ಅಲ್ಲ, ‘ಮಾನ್ಯತಾ ಟೆಕ್ ಫಾಲ್ಸ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ವ್ಯಾಲಿಯ 300 ಎಕರೆ ವಿಸ್ತೀರ್ಣದ ಮಾನ್ಯತಾ ಟೆಕ್​ ಪಾರ್ಕ್​​​ನಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಕೆಲಸಗಾರರು ಕಚೇರಿಯಲ್ಲಿ ಇರುವಂತಾಗಿದ್ದು, ಬಳಿಕ ನೀರು ಹರಿಯುವುದು ನಿಂತ ಬಳಿಕ ವಾಪಸ್​​ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಆರ್ಭಟ; ಜಲಾವೃತವಾದ ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!

ಕರ್ನಾಟಕ ಪೋರ್ಟ್‌ಫೋಲಿಯೊ ಎಂಬ ಸೋಶಿಯಲ್​ ಮೀಡಿಯಾದಲ್ಲಿ ಮಾನ್ಯತಾ ಟೆಕ್‌ಪಾರ್ಕ್‌ ಜಲಾವೃತಗೊಂಡ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಬ್ರ್ಯಾಂಡ್ ಬೆಂಗಳೂರಿನ ಮತ್ತೊಂದು ಸಾಧನೆ ಅನಾವರಣಗೊಂಡಿದೆ. ಭಾರೀ ಮಳೆಯಿಂದಾಗಿ, ಮಾನ್ಯತಾ ಟೆಕ್ ಪಾರ್ಕ್ ಜಲಾವೃತಗೊಂಡಿದ್ದು, “ಮಾನ್ಯತಾ ಟೆಕ್ ಫಾಲ್ಸ್” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಮಾನ್ಯತಾ ಟೆಕ್‌ಪಾರ್ಕ್‌ ಬಳಿ ರಸ್ತೆ ಬದಿಯೇ ಬೃಹತ್‌ ಕಟ್ಟಡ ಕಾಮಗಾರಿ ನಡೆಯುತ್ತಿದೆ. 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ರಸ್ತೆ ಪಕ್ಕದಲ್ಲೇ ಕ್ಷಣಕ್ಷಣ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆ ಕಾಂಪೌಂಡ್‌ ಕೂಡ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಇದನ್ನೂ ಓದಿ: ಭಾರಿ ಮಳೆಗೆ ಬೆಂಗಳೂರು ತತ್ತರ: ಬಿದ್ದ ಮರಗಳು, ಹಲವೆಡೆ ರಸ್ತೆಗಳೇ ಮಾಯ, ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಮಳೆಯ ಆರ್ಭಟಕ್ಕೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಕಾಣುತ್ತಿಲ್ಲ. ಮಂಡಿಯುದ್ದದ ನೀರಿನಲ್ಲೇ ಬೈಕ್‌ ಸವಾರರು ಡೆಡ್ಲಿ ಸವಾರಿ ಮಾಡುತ್ತಿದ್ದಾರೆ. ರಸ್ತೆ ತುಂಬಾ ಸಂಪೂರ್ಣ ನೀರು ತುಂಬಿಕೊಂಡಿದ್ದು, ಕಾರುಗಳು ಮುಳುಗಿ ಹೋಗಿವೆ. ಅದರಲ್ಲೂ ಗೋಡೆಯಿಂದ ಕೆಳಗೆ ಹರಿಯುವ ನೀರು ನೋಡುಗರಿಗೆ ಜಲಪಾತದಂತೆ ಭಾಸವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:35 am, Wed, 16 October 24