ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ, ಉತ್ತರ ಕರ್ನಾಟಕಕ್ಕೂ ಒಲಿದ ವರುಣ: ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

|

Updated on: May 15, 2024 | 8:40 AM

ಬರದಿಂದ ಕಂಗೆಟ್ಟಿದ್ದ ಕರ್ನಾಟಕದ ಜನತೆಗೆ ಕೊನೆಗೂ ಮಳೆ ತಂಪೆರೆಯುತ್ತಿದೆ. ಮಂಗಳವಾರ ಸಂಜೆ ಹಾಗೂ ರಾತ್ರಿ ರಾಜ್ಯದ ವಿವಿಧೆಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಅದೇ ರೀತಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಮಳೆಯಾಗಿದೆ. ಮಳೆ ಕುರಿತ ಪೂರ್ಣ ವಿವರ ಇಲ್ಲಿದೆ.

ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ, ಉತ್ತರ ಕರ್ನಾಟಕಕ್ಕೂ ಒಲಿದ ವರುಣ: ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಉಡುಪಿಯಲ್ಲಿ ಮಳೆ
Follow us on

ಬೆಂಗಳೂರು, ಮೇ 15: ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ಹಲವೆಡೆ ಮಂಗಳವಾರ ಸಂಜೆ, ರಾತ್ರಿಯೂ (Karnataka Rains) ಮಳೆಯಾಗಿದೆ. ನೀರಿಲ್ಲದೆ ಬರಡಾಗಿದ್ದ ಭೂಮಿಗೆ ಜಲ ಸಿಂಚನವಾಗಿದೆ. ಆದರೆ ವರುಣಾರ್ಭಟದಿಂದ ಕೆಲವೆಡೆ ಅವಾಂತರಗಳಾಗಿವೆ. ಕೃಷ್ಣನ ನಾಡು ಉಡುಪಿಯಲ್ಲೂ (Udupi) ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಉಡುಪಿ ನಗರ, ಮಣಿಪಾಲ, ಮಲ್ಪೆ, ಸಂತೆಕಟ್ಟೆ ಸುತ್ತುಮುತ್ತ ಉತ್ತಮ ಮಳೆಯಾಗಿದೆ. ಈ ನಡುವೆ ಕುಂದಾಪುರ (Kundapura) ತಾಲೂಕಿನ ಸಿದ್ದಾಪುರದಲ್ಲಿ ಸಿಡಿಲು ಬಡಿದು 38 ವರ್ಷದ ಸುರೇಶ್ ಶೆಟ್ಟಿ ಸಾವನಪ್ಪಿದ್ದಾರೆ.

ಇನ್ನು ಚಿಕ್ಕಮಗಳೂರಿನಲ್ಲಿ ಇಂದು, ಅಂದರೆ ಬುಧವಾರ ಬೆಳಗ್ಗೆಯೇ ಮಳೆ ಸುರಿದಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬೆಳ್ಳಂಬೆಳಗ್ಗೆ ವರ್ಷಧಾರೆ‌ ಸುರಿದಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ ಕೊಪ್ಪ, ಕಳಸ ದಲ್ಲಿ ಭಾರೀ ಮಳೆಯಾಗುತ್ತಿದೆ. ಬಿರುಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸರಿಯುತ್ತಿದೆ. ಸುಮಾರು ಒಂದು ಗಂಟೆಗಳಿಂದಲೂ ಎಡೆಬಿಡದೆ ಸುರಿಯುತ್ತಿದೆ.

ಉತ್ತರ ಕನ್ನಡದಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಯ್ತು. ಬಿರುಗಾಳಿ, ಮಳೆಯಿಂದ ಮರಗಳು, 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದವು. ಶಿರಸಿ ಪಟ್ಟಣದ ಸಹ್ಯಾದ್ರಿ ಕಾಲೋನಿಗೆ ತೆರಳುವ ರಸ್ತೆ ಬಂದ್ ಆಗಿತ್ತು. ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.

ಯಾದಗಿರಿ, ಬಾಗಲಕೋಟೆಯಲ್ಲೂ ಮಳೆರಾಯನ ಅಬ್ಬರ


ಬಿರುಬಿಸಿಲ ನಾಡು ಯಾದಗಿರಿಯಲ್ಲಿ ಮಳೆ ಆಗಮನ ತಂಪುಂಟು ಮಾಡಿದೆ. 1 ಗಂಟೆ ವರುಣ ಅಬ್ಬರಿಸಿದ್ದು ರೈತರಿಗೆ ಖುಷಿ ತಂದಿದೆ.

ಬಾಗಲಕೋಟೆ ನಗರ ಹಾಗೂ ಜಿಲ್ಲೆಯಾದ್ಯಂತ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ಬೆಂದುಹೋಗಿದ್ದ ಇಳೆ ತಣ್ಣಗಾಗಿದೆ.

ಹುಬ್ಬಳ್ಳಿಯಲ್ಲಿ ಮರ ಬಿದ್ದಿರುವುದು

ಮೋಡ ಕವಿದ ವಾತಾವರಣ ಇದ್ದರೂ ಶಿವಮೊಗ್ಗದಲ್ಲಿ ಕಳೆದ 3 ದಿನಗಳಿಂದ ಮಳೆ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಆದರೆ ಕೊನೆಗೂ ಮಳೆಯಾಗಿದೆ.

ಇದನ್ನೂ ಓದಿ: ಮೇ ತಿಂಗಳಲ್ಲೇ ಭಾರತ ಪ್ರವೇಶಿಸಲಿದೆ ಮುಂಗಾರು, ಯಾವ್ಯಾವ ರಾಜ್ಯಗಳಲ್ಲಿ ಯಾವಾಗ ಮಳೆ?

ಈ ಮಧ್ಯೆ, ಈ ಬಾರಿ ನೈಋತ್ಯ ಮುಂಗಾರು ವಾಡಿಕೆಗೂ ಮುನ್ನವೇ ದೇಶವನ್ನು ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 19ರೊಳಗೆ ಮುಂಗಾರು ದೇಶವನ್ನು ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 am, Wed, 15 May 24