ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಕೋರ್ಟ್ ಪ್ರವೇಶ ಮಾಡಿದೆ. 3-4 ಎಫ್ಐಆರ್ಗಳನ್ನು ದಾಖಲಿಸಿಕೊಂಡು, ಅನುಮಾನದ ಮೇಲೆ ಹತ್ತಾರು ಮಂದಿಯನ್ನು ವಿಚಾರಣೆಗೆ ಕರೆಸುತ್ತಿರುವ ಪ್ರಕರಣದ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ. ಅಂತೆಯೇ, ಈ ಹಿಂದೆ, ಪ್ರಕರಣ ಸಂಬಂಧ ಆರೋಪಿಯೊಬ್ಬರ ಸಹೋದರನನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರಂತೆ. ಈ ಹಿನ್ನೆಲೆಯಲ್ಲಿ, ಆತನ ಪೋಷಕರು ತಮ್ಮ ಪುತ್ರ ಕಾಣೆಯಾಗಿದ್ದಾನೆ, ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಪೀಠವು ನಾಳೆ ಬೆಳಗ್ಗೆ 10.30ಕ್ಕೆ ಚೇತನ್ ಎಂಬ ಯುವಕನನ್ನು ಕೋರ್ಟ್ ಎದುರು ಹಾಜರುಪಡಿಸಿ ಎಂದು ಸೂಚಿಸಿದೆ.
ಪ್ರಕರಣದ ಆರೋಪಿಯಾದ ಶ್ರವಣ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಆತನ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಆತನ ಸಹೋದರ ಚೇತನ್ರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಆದರೆ, ಆತ ಹಾಗೂ ಆರೋಪಿ ಶ್ರವಣ್ ಅವರ ತಂದೆ ಈ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ವಿಚಾರಣೆ ನಡೆಸಿದೆ.
ಈ ವೇಳೆ, ಮಾರ್ಚ್ 16ರಿಂದ ನನ್ನ ಪುತ್ರ ಚೇತನ್ ನಾಪತ್ತೆಯಾಗಿದ್ದಾರೆ. ಚೇತನ್ನನ್ನು ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಗೆ ಹೋಗಿದ್ದ ಚೇತನ್ ಮಾರ್ಚ್ 16ರಿಂದ ಮರಳಿ ಬಂದಿಲ್ಲವೆಂದು ಯುವಕನ ತಂದೆ ಸೂರ್ಯಕುಮಾರ್ ಪರ ವಕೀಲರು ತಮ್ಮ ವಾದ ಮಂಡಿಸಿದರು. ಇದಕ್ಕೆ, ಚೇತನ್ ಎಲ್ಲಿದ್ದಾನೆ ಎಂದು ಹೈಕೋರ್ಟ್ ಸರ್ಕಾರಿ ವಕೀಲರಿಗೆ ಪ್ರಶ್ನಿಸಿತು.
ಚೇತನ್ ಅವರ ಹೇಳಿಕೆ ಪಡೆಯಲು ಆತನನ್ನು ಠಾಣೆಗೆ ಕರೆಸಲಾಗಿತ್ತು. ಮಾರ್ಚ್ 18ರಂದು ಚೇತನ್ ವಿಚಾರಣೆಗೆ ಬಂದಿದ್ದ. ಈ ವೇಳೆ, ಮತ್ತೆ, ಮಾರ್ಚ್ 20ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಚೇತನ್ರನ್ನು ನಾವು ಬಂಧಿಸಿಲ್ಲ ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು. ಇದಲ್ಲದೆ, ಅವರ ಆಂಟಿ ಅಂಬುಜಾಕ್ಷಿಯವರ ಜೊತೆ ಕಳಿಸಲಾಗಿದೆ. ಆತ ಅಕ್ರಮ ಬಂಧನದಲ್ಲಿ ಇಲ್ಲ ಎಂದು ಸರ್ಕಾರಿ ವಕೀಲರು ಕೋರ್ಟ್ಗೆ ತಿಳಿಸಿದರು. ನೋಟಿಸ್ನಲ್ಲಿ ಸೂಚಿಸಿದ ಹಾಗೆ, ಆತ ಮಾ. 15, 16,18 ರಂದು ಹಾಜರಾಗಿದ್ದ. ಈ ಕುರಿತು, ಪ್ರಮಾಣ ಪತ್ರ ಸಲ್ಲಿಸುವುದಾಗಿ ವಕೀಲರು ತಿಳಿಸಿದರು.
ಅಂತಿಮವಾಗಿ, ನಾಳೆ ಬೆಳಗ್ಗೆ 10.30ಕ್ಕೆ ಚೇತನ್ರನ್ನು ಹೈಕೋರ್ಟ್ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ. ನ್ಯಾ.ಬಿ.ವಿ.ನಾಗರತ್ನ, ನ್ಯಾ.ಸಂಜಯ್ ಗೌಡರವರಿದ್ದ ಪೀಠ ಸೂಚನೆ ನೀಡಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸೂತ್ರಧಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ, ನಾಳೆ ಪ್ರತ್ಯಕ್ಷವಾಗಲಿದ್ದಾರಾ ಯುವತಿ ಪೋಷಕರು?
Published On - 6:01 pm, Fri, 19 March 21