ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಂದೊಡ್ಡಿರುವ ದುಸ್ಥಿತಿ ಎದುರಿಸಲು ಜನಸಾಮಾನ್ಯರ ನೆರವಿಗೆ ನಿಂತಿರೋ ಹೈಕೋರ್ಟ್ ಸಂಕಷ್ಟ ನಿವಾರಣೆಗೆ ಸರ್ಕಾರಕ್ಕೆ ಹಲವು ಸೂಚನೆಗಳನ್ನು ನೀಡಿದೆ. ಇದೀಗ 2 ನೇ ಅಲೆ ಎದುರಿಸಲು ವಿಫಲವಾಗಿರುವ ಸರ್ಕಾರಕ್ಕೆ 3 ನೇ ಅಲೆ ಎದುರಿಸಲು ಈಗಲೇ ಸಿದ್ಧವಿರುವಂತೆ ಎಚ್ಚರಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ರಾಜ್ಯದಲ್ಲಿರಬೇಕಾಗಿದ್ದ ಸೌಕರ್ಯಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಇದನ್ನು ಪರಿಶೀಲಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರ ಆಸ್ಪತ್ರೆಗಳ ಬೆಡ್ ಲಭ್ಯತೆ ಸುಧಾರಿಸಲು ಕ್ರಿಯಾ ಯೋಜನೆ ರಚಿಸಿ 2 ವಾರದಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಸರ್ಕಾರ ಮಾಡಬೇಕಾಗಿದ್ದೇನು?
ರಾಜ್ಯದ ಬೆಡ್ ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ರಾಜ್ಯ ಕೊರೊನಾ ಸೋಂಕು ಎದುರಿಸಲು 66,333 ಆಕ್ಸಿಜನ್ ಬೆಡ್, 13,969 ಐಸಿಯು, 8,382 ವೆಂಟಿಲೇಟರ್ ಬೆಡ್ ಬೇಕೆಂದು ಹೇಳಿದೆ. ಆದರೆ ರಾಜ್ಯದಲ್ಲಿ ಸದ್ಯ 45,754 ಆಕ್ಸಿಜನ್ ಬೆಡ್, 5,305 ಐಸಿಯು ಬೆಡ್, 4,109 ವೆಂಟಿಲೇಟರ್ ಬೆಡ್ ಮಾತ್ರವಿದೆ. ಬೆಡ್ ಹೆಚ್ಚಿಸಲು ರೂಪುರೇಷೆ ಸಿದ್ದಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟಪ್ಪಣೆ ಮಾಡಿದೆ. ಇದೇ ವೇಳೆ ಏರ್ ಫೋರ್ಸ್ ಜಾಲಹಳ್ಳಿಯಲ್ಲಿ ಸರ್ವಸಜ್ಜಿತ 100 ಬೆಡ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಈವರೆಗೂ ಈ ಬೆಡ್ ಬಳಸಲು ಬಿಬಿಎಂಪಿ ವಿಫಲವಾಗಿರುವ ಬಗ್ಗೆ ವಿವರಣೆ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ತಾಕೀತು ಮಾಡಿದೆ. ರೈಲ್ವೆ ಇಲಾಖೆ ಒದಗಿಸಿರುವ ಬೆಡ್ ಗಳನ್ನು ಬಳಸಿಕೊಳ್ಳದ ಸರ್ಕಾರಕ್ಕೂ ವಿವರಣೆ ನೀಡುವಂತೆ ಸೂಚನೆ ನೀಡಿದೆ.
ಇನ್ನು ಹೈಕೋರ್ಟ್ ಸೂಚನೆ ನಂತರ ರಾಜ್ಯಕ್ಕೆ ರೆಮ್‌ಡಿಸಿವಿರ್ ಹಂಚಿಕೆ ಪ್ರಮಾಣ ಹೆಚ್ಚಳ ಮಾಡಲಾಗಿದೆ ಪ್ರತಿ ದಿನಕ್ಕೆ 40,000 ನಂತೆ ರೆಮ್‌ಡಿಸಿವಿರ್ ಹಂಚಿಕೆ ಮಾಡಿರುವುದಾಗಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ. ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ರೆಮ್‌ಡಿಸಿವಿರ್ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಆಡಿಟಿಂಗ್ ಅಗತ್ಯವಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಇನ್ನು ರಾಜ್ಯದಲ್ಲಿ ವ್ಯಾಕ್ಸಿನೇಷನ್ ಬಗ್ಗೆಯೂ ಸರ್ಕಾರಕ್ಕೆ ಸೂಚನೆ ನೀಡಿರುವ ಹೈಕೋರ್ಟ್ ಇಂದು ಈ ಸಂಬಂಧ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ
Published On - 8:32 am, Thu, 13 May 21