ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಕೊಡಗಿನಲ್ಲಿ ನಡೆದ ಘಟನೆ ದುರದೃಷ್ಟಕರ, ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ, ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು, ಸ್ಥಾನಕ್ಕೆ ಗೌರವ ಕೊಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ನೀಡುತ್ತಿದ್ದೇವೆ, ನಿನ್ನೆ ಕೊಡಗಿನಲ್ಲೂ ರಕ್ಷಣೆ ಕೊಡಲಾಗಿತ್ತು ಎಂದಿದ್ದಾರೆ.
ವೀರ ಸಾವರ್ಕರ್ ಫೋಟೋದ ಬಗ್ಗೆ ಸಿದ್ದರಾಮ್ಯ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಯೋಚನೆ ಮಾಡಿ ಮಾತಾಡುವುದು ಒಳ್ಳೆಯದು, ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಇಟ್ಟಿರಲಿಲ್ಲ. ಮಾಹಿತಿ ತಪ್ಪಿನಿಂದ ಸಿದ್ದರಾಮಯ್ಯನವರು ಹಾಗೆ ಹೇಳಿದ್ದಾರೆ. ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತಿದ್ದಾರಾ? ಇಂತಹ ಹೇಳಿಕೆಗಳು ಎಲ್ಲರ ಭಾವನೆಗಳನ್ನು ಕೆರಳಿಸುತ್ತದೆ. ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡೋದು ಜನ ಸಹಿಸಲ್ಲ. ಯಾರದೇ ಭಾವನೆ ಕೆರಳಿಸದಂತೆ ಹೇಳಿಕೆ ನೀಡಬೇಕಾಗುತ್ತದೆ. ಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಸರಿಯಿಲ್ಲ ಅಂತಾ ಹೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಅರ್ಥವಿಲ್ಲ, ಸಿದ್ದರಾಮಯ್ಯ ಅವರಂತಹ ಹಿರಿಯರಿಗೆ ನಾನು ಪಾಠ ಮಾಡುವ ಅವಶ್ಯಕತೆ ಇಲ್ಲ, ಅವರನ್ನು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ವೀರ ಸಾವರ್ಕರ್ ಅವರ ಫೋಟೋವನ್ನು ಹಾಕಿದ್ದಕ್ಕೆ ಶಿವಮೊಗ್ಗದಲ್ಲಿ ಎಸ್ಡಿಪಿಐ ಸಂಘಟನೆಯವರು ವಿರೋಧ ವ್ಯಕ್ತಪಡಿಸಿ ಫೋಟೋ ತೆಗೆಯುವಂತೆ ಪಟ್ಟುಹಿಡಿದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಗಾಂಧಿ ಬಜಾರ್ನಲ್ಲಿ ನಡೆದ ಈ ಗುಂಪು ಘರ್ಷಣೆಯಲ್ಲಿ ಪ್ರೇಮ್ ಸಿಂಗ್ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು. ಈ ಬಗ್ಗೆ ಹೇಳಿಕೆ ನೀಡುವ ಭರದಲ್ಲಿ ಸಿದ್ದರಾಮಯ್ಯ ಅವರು, ಸಾವರ್ಕರ್ ಫೋಟೋವನ್ನು ಮುಸ್ಲಿಂ ಏರಿಯಾಗಳಲ್ಲಿ ಅಳವಡಿಸಿದ್ದು ಏಕೆ ಎಂದು ಪ್ರಶ್ನಿಸಿದ್ದರು. ಇದು ಹಿಂದೂ ಸಂಘಟನೆಗಳ ಹಾಗೂ ಬಿಜೆ ಕಾರ್ಯಕರ್ತರನ್ನು ಕೆರಳಿಸಿತ್ತು. ಇದಾದ ಬಳಿಕ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರ ತೀವ್ರ ಪ್ರತಿಭಟನೆಯನ್ನು ಎದುರಿಸಿದರು. ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Fri, 19 August 22